ಪ್ರಗತಿವಾಹಿನಿ ಸುದ್ದಿ, ಮಂಗಳೂರು -18 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮುಡಿಪು ನಿವಾಸಿ ವಿದ್ಯಾರ್ಥಿನಿ ಫಿಯೋನಾ ಕುಟ್ಹಿನೋ (16) ನಾಪತ್ತೆ ಪ್ರಕರಣಕ್ಕೆ ಭಯಾನಕ ತಿರುವು ಸಿಕ್ಕಿದೆ. ಬಾಲಕಿಯ ಅಸ್ಥಿಪಂಜರವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಫಿಯೋನಾ ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿದ್ದಳು. ಈ ಸಂಬಂಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪಾಲಕರು ದೂರು ದಾಖಲಿಸಿದ್ದರು. ಆಕೆ ಮಂಗಳೂರಿಗೆ ತೆರಳುವುದಾಗಿ ಹೇಳಿ ಹೋಗಿದ್ದಾಳೆ ಎಂದು ಸಹೋದರ ಸಾಮ್ಸನ್ (18) ಹೇಳಿಕೆ ನೀಡಿದ್ದ.
15 ದಿನಗಳಾದರೂ ವಿದ್ಯಾರ್ಥಿನಿ ಪತ್ತೆಯಾಗದಿದ್ದಾಗ ಮುಡಿಪು ನಿವಾಸಿಗಳು ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಒತ್ತಡ ಹೇರಿದ್ದರು. ಅವರು ತನಿಖೆಗೆ ವಿಶೇಷ ತಂಡ ರಚಿಸಿದ್ದರು.
ವಿದ್ಯಾರ್ಥಿನಿಯ ಮೊಬೈಲ್ ಕೊನೆಯ ನೆಟ್ ವರ್ಕ್ ಮುಡಿಪು ಪ್ರದೇಶದಲ್ಲೇ ಪತ್ತೆಯಾಗಿದ್ದರಿಂದ ಪೊಲೀಸರು ಮನೆಯವರನ್ನೇ ಇನ್ನಷ್ಟು ವಿಚಾರಣೆಗೆ ಒಳಪಡಿಸಿದ್ದರು. ನಿನ್ನೆ ಆಕೆಯ ಸಹೋದರನನ್ನು ತೀವ್ರ ವಿಚಾರಣೆ ನಡೆಸಿದರು.
ನಡೆದಿದ್ದೇನು?
ವಿದ್ಯಾರ್ಥಿನಿಯ ತಾಯಿ ಉದ್ಯೋಗಸ್ಥೆಯಾಗಿದ್ದು, ತಂದೆ ನಿವೃತ್ತ ಉದ್ಯೋಗಿ. ಆ ದಿನ ಮನೆಯಲ್ಲಿ ವಿದ್ಯಾರ್ಥಿನಿಯ ತಂದೆ, ಸಾಮ್ಸನ್ ಮತ್ತು ಫಿಯೋನಾ ಇದ್ದರು. ಆದರೆ ತಂದೆ ಸಾಮಾನು ತರಲೆಂದು ಹೊರಗಡೆ ಹೋಗಿದ್ದರು. ಅವರು ವಾಪಸ್ ಬಂದಾಗ ಮಗಳು ಇರಲಿಲ್ಲ. ಮಗನ ಬಳಿ ವಿಚಾರಿಸಿದಾಗ ಆಕೆ ಮಂಗಳೂರಿಗೆ ತೆರಳಿದ್ದಾಳೆ ಎಂದು ತಿಳಿಸಿದ್ದ. ಸಂಜೆಯವರೆಗೂ ಆಕೆ ವಾಪಸ್ ಬಾರದಿದ್ದಾಗ ಪೊಲೀಸ್ ದೂರು ದಾಖಲಿಸಲಾಗಿತ್ತು.
ನಿನ್ನೆ ಸಾಮ್ಸನ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತ ನಡೆದ ಸಂಗತಿ ಬಾಯಿಬಿಟ್ಟಿದ್ದಾನೆ. ಅಣ್ಣ -ತಂಗಿಯ ಮಧ್ಯೆ ಯಾವುದೋ ವಿಷಯಕ್ಕೆ ಜಗಳವಾಗಿದೆ. ಅದು ವಿಕೋಪಕ್ಕೆ ಹೋಗಿ ಆತನೇ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದ. ನಂತರ ಮುಡಿಪು ಗುಡ್ಡದಲ್ಲಿ ಶವ ಬೀಸಾಕಿ ಬಂದಿದ್ದ. ಸಾಮ್ಸನ್ ನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಲಾಗಿದೆ.
ಸಾಮ್ಸನ್ ಮಾದಕ ದ್ರವ್ಯದ ದಾಸನಾಗಿದ್ದ, ಅದರಿಂದಲೇ ಇಂತಹ ಕೃತ್ಯಕ್ಕೆ ಇಳಿದಿರಬಹುದು ಎಂದು ಶಂಕಿಸಲಾಗಿದೆ. ವಿಚಾರಣೆ ಮುಂದುವರಿದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ