ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದರು. ಕೆಲವು ಮಠಾಧೀಶರು ಮತ್ತು ರಾಜಕಾರಣಿಗಳ ಮನವಿ ಸ್ವೀಕರಿಸಿದ ನಂತರ ಏಕಪಕ್ಷೀಯವಾಗಿ ಇಂತಹ ನಿರ್ಧಾರಕ್ಕೆ ಬಂದ ಯಡಿಯೂರಪ್ಪ, ಈ ವಿಷಯವನ್ನು ಬರಲಿರುವ ಸಚಿವಸಂಪುಟ ಸಭೆಯಲ್ಲಿ ಮಂಡಿಸುವಂತೆ ಸರಕಾರದ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು.
ಯಡಿಯೂರಪ್ಪನವರ ಈ ನಿರ್ಧಾರ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಬಳ್ಳಾರಿ ಜಿಲ್ಲೆಯ ಸ್ವಪಕ್ಷೀಯ ನಾಯಕರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಸೋಮಶೇಖರ ರೆಡ್ಡಿ ಬಹಿರಂಗವಾಗಿಯೇ ಸಿಡಿದೆದ್ದಿದ್ದರು. ಶ್ರೀರಾಮುಲು ತಣ್ಣಗಾಗಿಯೋ ಯಡಿಯೂರಪ್ಪ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಯಡಿಯೂರಪ್ಪ ಕಂಗಾಲಾಗಿದ್ದರು. ತಮ್ಮ ಕಾಲಿನ ಬುಡಕ್ಕೆ ತಾವೇ ಹಾವು ಬಿಟ್ಟುಕೊಂಡಂತಾಗಿದ್ದರು.
ಬೆಳಗಾವಿಯಲ್ಲೂ ಕೂಗು
ಯಾವಾಗ ಬಳ್ಳಾರಿ ಜಿಲ್ಲೆ ವಿಭಜನೆ ಮಾಡುವುದಾಗಿ ಯಡಿಯೂರಪ್ಪ ಘೋಷಿಸಿದರೋ ಆಗ ರಾಜ್ಯದ ಅತಿ ದೊಡ್ಡ ಜಿಲ್ಲೆಯಾದ ಬೆಳಗಾವಿಯಲ್ಲಿ ಕೂಗೆದ್ದಿತು. ಬೆಳಗಾವಿ ಜಿಲ್ಲೆಯನ್ನೂ ವಿಭಜಿಸಬೇಕೆಂದು ಚಿಕ್ಕೋಡಿ, ಗೋಕಾಕ ಭಾಗದಲ್ಲಿ ಪ್ರತಿಭಟನೆಯ ಮಾತು ಕೇಳಿಬಂದಿತು. ಬೈಲಹೊಂಗಲ ಕೇಂದ್ರಸ್ಥಾನ ಮಾಡಿ ಜಿಲ್ಲೆ ಮಾಡಬೇಕೆನ್ನುವ ಆಗ್ರಹವೂ ಹೊರಬಿದ್ದಿತ್ತು.
ಚಿಕ್ಕೋಡಿ ಜಿಲ್ಲೆ ಮಾಡಲು ಬದ್ಧ ಎಂದು ಸಚಿವೆ ಶಶಿಕಲಾ ಜೊಲ್ಲೆ ಕೂಡ ಹೇಳಿಕೆ ನೀಡಿದ್ದರು. ಅಥಣಿ ಕೇಂದ್ರಸ್ಥಾನ ಮಾಡಿ ಜಿಲ್ಲೆ ಮಾಡಲು ಸಚಿವ ಲಕ್ಷ್ಮಣ ಸವದಿ ಈ ಹಿಂದೆಯೇ ಒಲವು ತೋರಿಸಿದ್ದರು. ಗೋಕಾಕ ಜಿಲ್ಲೆ ಮಾಡಲು ಜಾರಕಿಹೊಳಿ ಸಹೋದರರು ತುದಿಗಾಲ ಮೇಲೆ ನಿಂತಿದ್ದಾರೆ.
ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಯಡಿಯೂರಪ್ಪ
ಈ ವಿವಾದ ಇನ್ನೇನು ಬೆಂಕಿ ಹೊತ್ತಿಕೊಳ್ಳುತ್ತದೆ ಎನ್ನುವಾಗ ಉಪಚುನಾವಣೆ ಘೋಷಣೆಯಾಗಿದೆ. ಅಕ್ಟೋಬರ್ 21ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಿಗದಿ ಮಾಡಲಾಯಿತು. ತಕ್ಷಣದಿಂದಲೇ ನೀತಿಸಂಹಿತೆ ಜಾರಿಯಾಯಿತು. ಇದರಿಂದಾಗಿ ಜಿಲ್ಲಾ ವಿಭಜನೆ ಕೂಗು ತಾತ್ಕಾಲಿಕವಾಗಿ ತಣ್ಣಗಾಗಿದೆ.
ಜಿಲ್ಲೆಗಳ ವಿಭಜನೆ ಕೂಗು ಕೇವಲ ಬಳ್ಳಾರಿ, ಬೆಳಗಾವಿಗೆ ಸೀಮಿತವಾಗಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲೂ ವಿಭಜನೆಯ ಕೂಗು ಅನೇಕ ವರ್ಷಗಳಿಂದ ಇದೆ. ಒಮ್ಮೆ ಕೈ ಹಾಕಿದರೆ ಸಧ್ಯದ ಪರಿಸ್ಥಿತಿಯಲ್ಲಿ ಜೇನು ಗೂಡಿಗೆ ಕೈಹಾಕಿದಂತಾಗುತ್ತದೆ. ಸರಕಾರವನ್ನೇ ಅಲ್ಲಾಡಿಸುವ ಮಟ್ಟಕ್ಕೂ ಹೋಗಬಹುದು.
ಉಪಚುನಾವಣೆ ಮುಗಿದ ಬಳಿಕ ಈ ವಿವಾದ ಯಾವ ರೀತಿಯ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.
ಬಳ್ಳಾರಿ ವಿಭಜನೆಗೆ ಯಡಿಯೂರಪ್ಪ ಒಲವು; ಮತ್ತೆ ಎಲ್ಲೆಡೆ ಹೋರಾಟ ಸಾಧ್ಯತೆ
ಸರಕಾರ ಕೆಡಗುವ ಶಾಸಕರಿಗೆ ದೊಡ್ಡ ಪಾಠವಾಯಿತೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ