Kannada NewsKarnataka NewsLatestPolitics

*ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು*: *ಕುಮಾರಸ್ವಾಮಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ವಾಗ್ದಾಳಿ ನಡೆಸಿದ್ದಾರೆ. “ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು” ಎಂದು ಟೀಕಿಸಿರುವ ಖರ್ಗೆ, ಸಿದ್ದರಾಮಯ್ಯ ವಿಚಾರದಲ್ಲಿ ಒಮ್ಮೆ ಮುಖ್ಯಮಂತ್ರಿ ಕಡೆಗೆ, ಮತ್ತೊಮ್ಮೆ ಸಚಿವ ಜಮೀರ್ ಅಹ್ಮದ್ ಕಡೆಗೆ, ಇನ್ನೊಮ್ಮೆ ಖರ್ಗೆ ಕುಟುಂಬದ ಕಡೆಗೆ ಬೆರಳು ತೋರಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ನಿನ್ನೆ ಏನು ಮಾತನಾಡಿದ್ದೆ, ಮೊನ್ನೆ ಏನು ಹೇಳಿದ್ದೆ, ಇಂದು ಮತ್ತು ನಾಳೆ ಏನು ಮಾತನಾಡುತ್ತೇನೆ ಎಂಬ ಸ್ಪಷ್ಟತೆ ಕುಮಾರಸ್ವಾಮಿಗೇ ಇಲ್ಲ ಎಂದು ಟೀಕಿಸಿದ್ದಾರೆ. ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದನ್ನು ಮನೆಮುರುಕತನ ಎನ್ನುತ್ತಾರೆ ಎಂಬ ಮಾತಿನ ಮೂಲಕವೂ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯಗೆ ರಾಜಕೀಯ ಜೀವನದುದ್ದಕ್ಕೂ ಅತಿ ಹೆಚ್ಚು ಅವಮಾನ ಮಾಡಿದವರು ಕುಮಾರಸ್ವಾಮಿ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಹುದ್ದೆ ತಪ್ಪಿಸುವಲ್ಲಿ ಕುಮಾರಸ್ವಾಮಿ ಪಾತ್ರವಿದೆ ಎಂದು ಹೇಳಿರುವ ಖರ್ಗೆ, ಇಷ್ಟು ದಿನ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡಿದ್ದವರು ಇದೀಗ ಖರ್ಗೆ ಕುಟುಂಬದ ಕಡೆಗೆ ತಿರುಗಿದ್ದಾರೆ ಎಂದು ಟೀಕಿಸಿದ್ದಾರೆ.

ಸ್ಟಿಂಗ್ ವಿಡಿಯೋ ಪ್ರಕರಣವನ್ನು ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ, ಕುಮಾರಸ್ವಾಮಿ ಅವರ ಐಟಿ ಸೆಲ್‌ನವರು ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ವಿಡಿಯೋ ಬಹಿರಂಗಪಡಿಸುವಲ್ಲಿ ಕಾಂಗ್ರೆಸ್‌ನವರ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ಹೇಳುವ ಧೈರ್ಯ ತೋರುತ್ತಿಲ್ಲವೇಕೆ? ವಿಡಿಯೋ ಅಪ್‌ಲೋಡ್ ಮಾಡಿದ್ದನ್ನು ಖಂಡಿಸುತ್ತಿಲ್ಲವೇಕೆ? ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ತೆರಳಿ ನಡೆಸಿದ ಷಡ್ಯಂತ್ರವೇನು ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಕುಮಾರಸ್ವಾಮಿ ತಮ್ಮ ಸಹೋದರನ ಕುಟುಂಬದ ಬೆಳವಣಿಗೆಯನ್ನೇ ಸಹಿಸಲಿಲ್ಲ ಎಂದು ಆರೋಪಿಸಿರುವ ಪ್ರಿಯಾಂಕ್ ಖರ್ಗೆ, ಇನ್ನು ಖರ್ಗೆ ಕುಟುಂಬವನ್ನು ಸಹಿಸಬಲ್ಲರೇ ಎಂದು ಪ್ರಶ್ನಿಸಿದ್ದಾರೆ. ಮಾತಿನಲ್ಲಿ ಘನತೆ ಬೆಳೆಸಿಕೊಳ್ಳಿ, ಸತ್ಯ ಹೇಳುವುದನ್ನು ರೂಢಿಸಿಕೊಳ್ಳಿ ಮತ್ತು ನಡತೆಯಲ್ಲಿ ತೂಕ ಹೆಚ್ಚಿಸಿಕೊಳ್ಳಿ ಎಂದು ಕೇಂದ್ರ ಸಚಿವರಿಗೆ ತಿರುಗೇಟು ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button