Kannada NewsKarnataka NewsLatest

*ಭಕ್ತರ ಒತ್ತಾಯಕ್ಕೆ ಮಣಿದು ಹಾಸನಾಂಬೆ ದರ್ಶನಕ್ಕೆ ಗ್ರೀನ್ ಸಿಗ್ನಲ್*: *ಜನಸಂದಣಿ ನಿಭಾಯಿಸಲು ಪೊಲೀಸರ ಹರಸಾಹಸ*

ಪ್ರಗತಿವಾಹಿನಿ ಸುದ್ದಿ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಾಲಯದ ಗರ್ಭಗುಡಿಯ ಬಾಗಿಲನ್ನು ಇಂದು (ಅಕ್ಟೋಬರ್ 29) ತೆರೆಯಲಾಗಿದೆ. ಸಾರ್ವಜನಿಕ ದರ್ಶನಕ್ಕೆ ಅವಕಾಶ ಇಲ್ಲದಿದ್ದರೂ ದೇವಿಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸಿದ್ದರು. ಆರಂಭದಲ್ಲಿ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಭಕ್ತರ ಒತ್ತಡದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಈ ವೇಳೆ ಭಾರೀ ನೂಕುನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.28ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಗೊನೆಯುಳ್ಳ ಬಾಳೆಕಂಬವನ್ನು ಕಡಿದ ಬಳಿಕ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ತೆರೆಯಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ‘ಹಾಸನಾಂಬೆಗೆ ಜಯವಾಗಲಿ’ ಎಂದು ಘೋಷಣೆ ಕೂಗಿ ಭಕ್ತಿಭಾವ ಮೆರೆದರು.

ಗರ್ಭಗುಡಿಯ ಬಾಗಿಲು ತೆರೆದಾಗ ನಂದಾದೀಪ ಉರಿಯುತ್ತಿತ್ತು, ದೇವಿಗೆ ಅರ್ಪಿಸಿದ್ದ ಹೂವುಗಳು ಬಾಡಿರಲಿಲ್ಲ ಮತ್ತು ನೈವೇದ್ಯವೂ ಹಳಸಿರಲಿಲ್ಲ ಎಂದು ಭಕ್ತರು ಗಮನಿಸಿದ್ದಾರೆ. ಇವು ಹಾಸನಾಂಬೆಯ ಪವಾಡದ ಸಂಕೇತ ಎಂಬ ನಂಬಿಕೆ ಭಕ್ತರಲ್ಲಿದೆ. ಬಳಿಕ 20 ಅರ್ಚಕರ ತಂಡದಿಂದ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಕ್ಟೋಬರ್ 30ರಿಂದ ಸಾರ್ವಜನಿಕರಿಗೆ ನಿಯಮಿತ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ ಎಂದು ನಂಬಲಾಗಿರುವ ಹಾಸನಾಂಬೆ ದೇವಾಲಯದಲ್ಲಿ ಪ್ರತಿವರ್ಷ ಗರ್ಭಗುಡಿಯ ಬಾಗಿಲು ಮುಚ್ಚುವಾಗ ಹಚ್ಚಿದ ಹಣತೆ, ಇಟ್ಟ ನೈವೇದ್ಯ ಮತ್ತು ದೇವಿಗೆ ಮುಡಿಸಿದ ಹೂವುಗಳು ಮುಂದಿನ ಬಾರಿ ಬಾಗಿಲು ತೆರೆಯುವಾಗಲೂ ಹಾಗೆಯೇ ಇರುತ್ತವೆ ಎಂಬ ನಂಬಿಕೆ ಇದೆ. ದೇವಿಯ ದರ್ಶನ ಪಡೆದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಭಕ್ತಿಯ ಕಾರಣದಿಂದ ಹಾಸನ ಮಾತ್ರವಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button