
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಿದವರಿಗೆ ಸತ್ಕಾರ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಸೈನಿಕ, ಪೋಲಿಸ್ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ಕರುನಾಡು ಸೈನಿಕ ತರಬೇತಿ ಕೇಂದ್ರ ಪ್ರಾರಂಭವಾಗಿ 1ವರ್ಷ 4ತಿಂಗಳ ಅವಧಿಯಲ್ಲಿ ಒಂದೇ ಬ್ಯಾಚ್ ನಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರೊ.ಎಸ್.ಬಿ.ಖೋತ್ ಹೇಳಿದರು.
ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಶಿಕ್ಷಕ ದಿನಾಚರಣೆ ನಿಮಿತ್ಯ ಸತ್ಕಾರ ಮತ್ತು ಉತ್ತಿರ್ಣರಾದ 20 ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿ ವಿದ್ಯಾರ್ಥಿಗಳ ದಿನಚರಿ ಮತ್ತು ಕಾರ್ಯವೈಖರಿಯನ್ನು ತಾವು ಸದಾ ಗಮನಿಸುತ್ತಿದ್ದು, ಉತ್ತಿರ್ಣರಾದ ಈ ಎಲ್ಲ ವಿದ್ಯಾರ್ಥಿಗಳು ಮೆರಿಟ್ ಮೇಲೆ ಪಾಸಾಗಿದ್ದು ಸಂಸ್ಥೆಗೆ ಅಷ್ಟೆ ಅಲ್ಲದೆ ನಾಡಿಗೆ ಕೀರ್ತಿ ತರುವ ವಿಷಯವಾಗಿದೆ. ದೇಶ ರಕ್ಷಣಾ ಕಾರ್ಯಕ್ಕೆ ಅಣಿಯಾಗುತ್ತಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ, ದೇಶ ಪ್ರೇಮ ಕರ್ತವ್ಯ ನಿಷ್ಠೆ ಬೆಳೆಸಿಕೊಂಡು ಗಡಿ ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಸಧ್ಯದಲ್ಲಿ ಯುದ್ಧ ನಡೆಯುವುದೆ ಇಲ್ಲ. ಇದು ಬರಿ ಉಹಾಪೋಹ. ಬಾವಿ ಸೈನಿಕರು ಧೈರ್ಯಗುಂದದೆ ಕಾರ್ಯಪ್ರರ್ವತ್ತರಾಗಬೇಕೆಂದರು.
ನಿಮ್ಮ ಸಾಧನೆಗೆ ಶ್ರೀ ಶಿವಬೋಧರಂಗ ಸ್ವಾಮಿ ಆಶೀರ್ವಾದವಿದ್ದು, ಸಂಚಾಲಕ ಶಂಕರ ತುಕ್ಕನ್ನವರ, ತರಬೇತುದಾರರ ಪರಿಶ್ರಮ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಸಂಸ್ಥೆ ಇನ್ನೂ ಪ್ರಗತಿ ಸಾದಿಸಲಿ, ಈ ಸಂಸ್ಥೆಗೆ ಸೂಕ್ತ ನಿವೇಶನ ಒದಗಿಸಿ ಕೊಡಲು ಯುವ ಮುಖಂಡ ಸಂತೋಷ ಸೋನವಾಲ್ಕರ್ ಪ್ರಯತ್ನಸಿದರೆ ನಿವೇಶನ ದೊರೆಯುವುದು ಕಷ್ಟದ ಕೆಲಸವೇನಲ್ಲ. ಅವಶ್ಯಕವೆನಿಸಿದರೆ ತಮ್ಮದೆ ಇರುವ 1 ಎಕರೆ ಜಮಿನಿನಲ್ಲಿ ಸಂಸ್ಥೆ ನಡೆಸಲು ಅನುಕೂಲ ಮಾಡಿಕೊಡುವುದಾಗಿ ಹೇಳಿ ಶುಭ ಕೋರಿದರು.

ಇದೇ ಸಮಯದಲ್ಲಿ ಮುಖ್ಯ ಅತಿಥಿ ಯುವ ಮುಖಂಡ ಪುರಸಭೆ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಸಂತೋಷ ಸೋನವಾಲ್ಕರ್, ಶಾಸಕರು ಈಗಾಗಲೆ ನಿವೇಶನ ಮಂಜೂರು ಮಾಡಿದ್ದಾರೆ ಎಂದು ಶಾಸಕರ ಪರವಾಗಿ ಹರ್ಷೋದ್ಗಾರಗಳ ನಡುವೆ ಘೋಷಣೆ ಮಾಡಿದರು.
ಹಿರಿಯ ಪತ್ರಕರ್ತ ಯ.ಯ.ಸುಲ್ತಾನಪೂರ ಮಾತನಾಡಿ, ಅನುಭವ ಇರುವಲ್ಲಿ ಅಮೃತವಿದೆ ಎಂಬಂತೆ 18ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಸಂಚಾಲಕ ತಮ್ಮ ಅನುಭವಗಳನ್ನು ಧಾರೆ ಎರೆದು ಸಂಸ್ಥೆ ಕಟ್ಟುವಲ್ಲಿ ಶ್ರಮಿಸಿದ ಬಗ್ಗೆ ಶ್ಲಾಘಿಸಿದರು.
ಅತಿಥಿ ಜಾನಪದ ಜಾಣ ಶಬ್ಬೀರ ಡಾಂಗೆ ಮಾತನಾಡಿ ದೇಶ ಪ್ರೇಮ, ದೇಶ ಭಕ್ತಿ ಬಗ್ಗೆ ಹೇಳಿ, ಸಂಚಾಲಕ ಶಂಕರ ತುಕ್ಕನ್ನವರ ಪಿ.ಎಸ್.ಐ.ಆಗಲು ಹೋಗಿ ವಿಫಲರಾಗಿ ಇಂದು ಪಿ.ಎಸ್.ಐ.ಗಳನ್ನು ತಯಾರು ಮಾಡುವ ಸಂಸ್ಥೆಯನ್ನು ತೆರೆದಿದ್ದು ಉತ್ತಮ ಕೆಲಸ ಎಂದು ಹೇಳಿ ಕಾರ್ಗಿಲ್ ಹುಲಿಗಳು ಎಂಬ ಸ್ವರಚಿತ ಹಾಡು ಹಾಡಿದರು.
ಸಂಸ್ಥೆಯ ಸಂಚಾಲಕ ಶಂಕರ ತುಕ್ಕನ್ನವರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮ ಬಾಲ್ಯ, ವಿದ್ಯಾರ್ಥಿ ಜೀವನದಲ್ಲಿ ಪಟ್ಟ ಕಷ್ಟಗಳಿಂದಲೇ ಛಲ ಸಾದಿಸಿ ಈ ಮಟ್ಟಕ್ಕೆ ಬಂದಿರುವುದಾಗಿ ಹೇಳಿ ಸಂಸ್ಥೆಯ ಪ್ರಗತಿಗೆ ಸಹಕರಿಸಿದ ಸಿಬ್ಬಂದಿ ಮಿತ್ರರ ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿ ಸಂಸ್ಥೆಯ ಪ್ರಗತಿಗೆ ಜೀವಮಾನ ಇರುವವರೆಗೆ ಶ್ರಮ ವಹಿಸುವುದಾಗಿ ಹೇಳಿದರು.
ವೇದಿಕೆಯಲ್ಲಿ ಸಾಹಿತಿ ಉಮೇಶ ಬೆಳಕೂಡ, ಮಾರ್ಗದರ್ಶಕಿ ಹೀನಾ ಪಟೀಲ, ಹಿತೈಷಿ ಅಸ್ಕರ ಇನಾಮದಾರ, ವಸತಿ ನಿಲಯ ಪಾಲಕ ಎಸ್.ಎಸ್.ಸೋರಗಾಂವಿ, ಅಲ್ತಾಫ್ ಹವಾಲ್ದಾರ, ಶಿಕ್ಷಕರಾದ ಅಶೋಕ ಸುಣದೋಳಿ, ಸದಾನಂದ ಚಿಪ್ಪಲಕಟ್ಟಿ, ಸೈನಿಕರಾದ ಮಹಾದೇವ ಡಬ್ಬನ್ನವರ, ಹಿರೇಮಠ, ನವೀನ ನಿಶಾನಿಮಠ, ಪರಮಾನಂದ ಮದಲಮಟ್ಟಿ ಹಾಗೂ ಸಿಬ್ಬಂದಿ ವರ್ಗ ಇದ್ದರು.
ತರಬೇತುದಾರ ಎಸ್.ಎಮ್.ಕುಂಬಾರ ಸ್ವಾಗತಿಸಿ, ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ