*ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ “ಮೇರಿ ದೇಶ್ ಕಿ ಧರತಿ” ಎಂಬ ವಿಶಿಷ್ಟ ಕಾರ್ಯಕ್ರಮ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾನವನ ವೈಯಕ್ತಿಕ ಮತ್ತು ವ್ಯವಹಾರಿಕ ಜೀವನದಲ್ಲಿ ವಿಶಿಷ್ಟ ಸ್ವಾಸ್ಥ್ಯ ಆರೋಗ್ಯ ಸಾಧಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ , ತಾಯಿಯ ಮಡಿಲು ಮತ್ತು ಶಿವಾನಿ ಮ್ಯೂಸಿಕ್ ಕ್ಲಬ್, ಬೆಳಗಾವಿಯ ಸಹಯೋಗದಲ್ಲಿ “ಮೇರಿ ದೇಶ್ ಕಿ ಧರತಿ, ರೋಗಗಳು ಮತ್ತು ಅಸ್ವಸ್ಥತೆಗಳಿಗೆ ಮನೆಮದ್ದು” ಎಂಬ ಜಾಗೃತಿ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಹಾಗೂ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ವೇದಿಕೆಯ ಸಮಾರಂಭದಲ್ಲಿ ಈ ಜಾಗೃತಿ ಕಾರ್ಯಕ್ರಮವನ್ನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಈಗಿನ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು ತಮ್ಮ ಆರೋಗ್ಯದ ಸ್ವಾಸ್ಥ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ ವಿಷಯ ಹಾಗೂ ನಮ್ಮ ದೇಶದ ಸಂಸ್ಕೃತಿ, ವಿಶಿಷ್ಟವಾದ ಔಷಧಿ ಗುಣಗಳನ್ನ ಹೊಂದಿದ ಮಣ್ಣಿನ ಮಹತ್ವ, ಆಹಾರ ಪದ್ಧತಿಗಳನ್ನ ಅರಿತು ದೇಶೀಯ ಸಂಸ್ಕೃತಿಗೆ ಮರಳಿ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ತಾಯಿಯ ಮಡಿಲು ಸಂಸ್ಥೆಗೆ ಆಶೀರ್ವಾದ ರೂಪದ ಶುಭಾಶಯ ಕೋರಿ ಪ್ರಸಂಶಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಯಿಯ ಮಡಿಲು ಮತ್ತು ಶಿವಾನಿ ಮ್ಯೂಸಿಕ್ ಕ್ಲಬ್, ಬೆಳಗಾವಿಯ ನಿರ್ದೇಶಕರಾದ ಡಾ.ಆನಂದರಾಜ್ ಗವಿಮಠ ಅವರು ವಿವಿಧ ರೋಗಗಳು ಮತ್ತು ಅಸ್ವಸ್ಥತೆಗಳಿಗೆ ಚಮತ್ಕಾರಿ ಹಾಗೂ ಅತ್ಯಂತ ಸರಳವಾಗಿ ತಯಾರಿಸಬಹುದಾದ ಮನೆಮದ್ದುಗಳ ಬಗ್ಗೆ ಸವಿವರವಾಗಿ ತಿಳಿಹೇಳಿದರು.
ಮೇರಿ ದೇಶ್ ಕಿ ಧರತಿ ಜಾಗೃತಿ ಕಾರ್ಯಕ್ರಮದ ಅಡಿಯಲ್ಲಿ ಸಾಮಾನ್ಯ ಕಾಯಿಲೆಗಳಿಗೆ ಸಾಂಪ್ರದಾಯಿಕ ಚಿಕಿತ್ಸೆಗಳು ಮತ್ತು ಮನೆಮದ್ದುಗಳ ಜೊತೆಗೆ ಮಧುರ ಮತ್ತು ಲಯಬದ್ಧವಾದ ಹಾಡುಗಳ ಮೂಲಕ ಮ್ಯೂಸಿಕ್ ಥೆರಪಿಯ ಉಪಯೋಗಗಳು, ಪಿರಮಿಡ್ ಧ್ಯಾನ – ಶಕ್ತಿ ಪಿರಮಿಡ್‌ಗಳ ಅಡಿಯಲ್ಲಿ ಗಮನ ಮತ್ತು ಆಂತರಿಕ ಶಾಂತಿಯನ್ನು ಹೇಗೆ ಅನ್‌ಲಾಕ್ ಮಾಡುವುದು ಎಂಬ ವಿಷಯಗಳ ಮೇಲೆ ನೈಸರ್ಗಿಕವಾದ ಪ್ರಯೋಗಗಳನ್ನ ವೇದಿಕೆ ಮೇಲೆ ನೆರವೇರಿಸಿದರು.
ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ಎಫ್.ವಿ.ಮಾನ್ವಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ್ದರು, ಪ್ರಾಚಾರ್ಯರಾದ ಡಾ. ಬಿ. ಆರ್. ಪಟಗುಂದಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರು ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ಮಂಜುನಾಥ ಶರಣಪ್ಪನವರ ಅವರು ಕಾರ್ಯಕ್ರಮವನ್ನ ಆಯೋಜಿಸಿ ವಂದಿಸಿದರು. ಪ್ರೊ. ಚಿತ್ರಶ್ರೀ ಅತಿಥಿಗಳನ್ನ ಪರಿಚಯಿಸಿದರು, ಪ್ರೊ. ಸುಶ್ಮಿತಾ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ