
ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾಕೋಡಿ ಎಂಬಲ್ಲಿ ಅಬ್ದುಲ್ ರಹೀಂ ಎಂಬುವವರ ಹತ್ಯೆ ಪ್ರಕರಣದ ಬೆನ್ನಲ್ಲೇ ಕಡಲ ನಗರಿಯಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಬ್ದುಲ್ ರಹಿಂ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಅಪಾರಸಂಖ್ಯೆಯಲ್ಲಿ ಜನ ಭಾಗವಹಿಸಿದ್ದು, ಬಲವಂತವಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತಿದೆ.
ಅಂತಿಮಯಾತ್ರೆ ಸಾಗುವ ವೇಳೆ ಫರಂಗಿಪೇಟೆ ಹಾಗೂ ಬಿ.ಸಿ.ರೋಡ್ ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಉಳ್ಳಾಲದ ಕುತ್ತಾರಿನಿಂದ ಹೊರಟ ಅಂತಿಮ ಯಾತ್ರೆ ಮಂಘಳೂರಿನ ನಂತೂರು, ಪಡೀಲ್ ಅಡ್ಯಾರ್, ಅರ್ಕುಳ, ಫರಂಗಿಪೇಟೆ, ಬಿ.ಸಿ.ರೋಡ್ ಮಾರ್ಗವಾಗಿ ಸಾಗಿತು. ಬಿ.ಸಿ.ರೋಡ್ ಮತ್ತು ಮಂಗಳೂರು ನಡುವೆ ವಾಹನ ಸಂಚಾರಕ್ಕೂ ಅಡ್ಡಿಯುಂಟಾದ ಘಟನೆ ನಡೆದಿದೆ.
ಸುರತ್ಕಲ್ ನಲ್ಲಿ ಕೆಲವು ಸಿಟಿ ಬಸ್ ಗಳು ಸಂಚಾರ ಸ್ಥಗಿತಗೊಳಿಸಿವೆ. ಸುರತ್ಕಲ್ ಮಂಗಳೂರು ಸುರತ್ಕಲ್, ಮುಕ್ಕ ಹಳೆಯಂಗದಿ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಪ್ರಯಾಣಿಕರನ್ನು ಬೇರೆ ಬಸ್ ಗಳಲ್ಲಿ ತಲುಪುವ ಸ್ಥಳಕ್ಕೆ ಕಳುಹಿಸಾಲಾಗಿದೆ.