Kannada NewsKarnataka NewsLatest

ಬೆಳಗಾವಿ, ನಿಪ್ಪಾಣಿಯಲ್ಲಿ ಎಸಿಬಿ ದಾಳಿ

ಬೆಳಗಾವಿ, ನಿಪ್ಪಾಣಿ ಯೋಜನಾ ಸಹಾಯಕ‌ ನಿರ್ದೇಶಕರ ಕಚೇರಿಗಳ ಮೇಲೆ ಎಸಿಬಿ ದಾಳಿ; ಮುಂದುವರಿದ ದಾಖಲೆ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿನ ಕಚೇರಿಗಳ ಮೇಲೆ‌ ಭ್ರಷ್ಟಾಚಾರ ನಿರ್ಮೂಲನಾ ದಳದ ಅಧಿಕಾರಿಗಳು ಇಂದು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಭೂಪರಿವರ್ತನೆ ಮತ್ತು ಲೇಔಟ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸಲು ವಿನಾಕಾರಣ ವಿಳಂಬ ಮಾಡುವುದು ಮತ್ತು ಸಾರ್ವಜನಿಕರಿಂದ‌ ಹೆಚ್ಚಿಗೆ ಹಣ ಕೀಳುತ್ತಿರುವ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಸುವರ್ಣ ವಿಧಾನಸೌಧ ಕಟ್ಟಡದಲ್ಲಿರುವ ಬೆಳಗಾವಿ‌ ವಿಭಾಗದ ಕಚೇರಿ ವ್ಯಾಪ್ತಿಗೆ ಬೆಳಗಾವಿ ಗ್ರಾಮಾಂತರ, ಖಾನಾಪೂರ, ಬೈಲಹೊಂಗಲ, ರಾಮದುರ್ಗ ಮತ್ತು ಸವದತ್ತಿ‌ ತಾಲೂಕುಗಳು ಒಳಪಡುತ್ತವೆ. ನಿಪ್ಪಾಣಿಯಲ್ಲಿರುವ ಚಿಕ್ಕೋಡಿ ವಿಭಾಗದ ಕಚೇರಿ ವ್ಯಾಪ್ತಿಗೆ ಅಥಣಿ, ಚಿಕ್ಕೋಡಿ, ಹುಕ್ಕೇರಿ, ರಾಯಬಾಗ ಮತ್ತು ಗೋಕಾಕ ತಾಲೂಕುಗಳು ಬರುತ್ತವೆ.
ಭೂಪರಿವರ್ತನೆ ಮತ್ತು ಲೇಔಟ್ ಪ್ರಕರಣಗಳನ್ನು ಇತ್ಯರ್ಥಪಡಿಸುವ ಮುಂಚೆ ಸದರಿ ಕಚೇರಿಗಳಿಂದ ಅಭಿಪ್ರಾಯ ಪಡೆಯಲಾಗುತ್ತದೆ. ಅಭಿಪ್ರಾಯ ನೀಡಲು ವಿನಾಕಾರಣ ವಿಳಂಬ ಮಾಡುತ್ತಿದ್ದ ಕಾರಣ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಎಸಿಬಿಗೆ ದೂರು ನೀಡಿದ್ದರು. ಆ‌ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ಮುಂದುವರಿದಿದೆ.
ಎಸಿಬಿ (ಉತ್ತರ ವಲಯ) ಎಸ್ಪಿ ಬಿ ಎಸ್ ನೇಮಗೌಡ ಅವರ ಮಾರ್ಗದರ್ಶನ ಹಾಗೂ ಡಿವೈಎಸ್ಪಿಗಳಾದ ಕರುಣಾಕರ ಶೆಟ್ಟಿ ಮತ್ತು ಮಂಜುನಾಥ ಗಂಗಲ ಇವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಇನ್ಸಪೆಕ್ಟರ್ ಗಳಾದ ಅಡಿವೇಶ ಗುದಿಗೊಪ್ಪ, ಸುನಿಲಕುಮಾರ್, ಅಲಿಶೇಖ ಮತ್ತು ಪರಮೇಶ ಕವಟಗಿ ಸೇರಿದಂತೆ 20ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button