*ಕೊಲೆ ಯತ್ನ ಪ್ರಕರಣದ ಆರೋಪಿಗಳೇ ಶವವಾಗಿ ಪತ್ತೆ*: *ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಜೋಡಿ ಮೃತದೇಹ*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಪುರುಷ ಮತ್ತು ಮಹಿಳೆಯ ಜೋಡಿ ಮೃತದೇಹ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರೂ ಈ ಹಿಂದೆ ದಾಖಲಾಗಿದ್ದ ಗಂಭೀರ ಕೊಲೆ ಯತ್ನ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಗೆ ನರ್ಸ್ ಎಂದು ಪರಿಚಯಿಸಿಕೊಂಡು ಇಂಜೆಕ್ಷನ್ ನೀಡಲಾಗಿತ್ತು ಎಂಬ ಆರೋಪವೂ ಈ ಪ್ರಕರಣದಲ್ಲಿ ಕೇಳಿ ಬಂದಿತ್ತು. ಪ್ರಕರಣದ ಬಳಿಕ ಇಬ್ಬರೂ ನಾಪತ್ತೆಯಾಗಿದ್ದು, ಪೊಲೀಸರು ಪತ್ತೆಗಾಗಿ ಶೋಧ ನಡೆಸುತ್ತಿದ್ದರು. ಈ ನಡುವೆ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಚಾರ್ಸಲ್ ಪ್ರದೇಶದ ಸೌಪರ್ಣಿಕಾ ನದಿ ಸಮೀಪ ಇಬ್ಬರ ಮೃತದೇಹ ಪತ್ತೆಯಾಗಿದೆ.
ಮೃತರನ್ನು ಚಾರ್ಸಾಲು ಮೂಲದ ವಿಠಲ್ ನಾಯ್ಕ (36) ಹಾಗೂ ಹೊಸೂರು ಮೂಲದ ಭವ್ಯಾ ಅಲಿಯಾಸ್ ನಿಶ್ಮಿತಾ (33) ಎಂದು ಗುರುತಿಸಲಾಗಿದೆ. ಇಬ್ಬರೂ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.
ವಿಠಲ್ ನಾಯ್ಕ ಹಾಗೂ ಭವ್ಯಾ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಆರೋಪ ಕೇಳಿ ಬಂದಿದೆ. ಅನಾರೋಗ್ಯದಲ್ಲಿದ್ದ ವಿಠಲ್ ನಾಯ್ಕ ಪತ್ನಿಗೆ ಇಬ್ಬರೂ ಸೇರಿ ಇಂಜೆಕ್ಷನ್ಗಳನ್ನು ನೀಡಿ ವಿಷಪ್ರಾಶನಗೊಳಿಸಿ ಕೊಲೆ ಮಾಡಲು ಯತ್ನಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಭವ್ಯಾ ನರ್ಸ್ ಎಂದು ಪರಿಚಯಿಸಿಕೊಂಡು ವಿಠಲ್ ನಾಯ್ಕ ಪತ್ನಿಗೆ ಇಂಜೆಕ್ಷನ್ ನೀಡಿದ್ದರು ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ವಿಠಲ್ ಹಾಗೂ ಭವ್ಯಾ ನಾಪತ್ತೆಯಾಗಿದ್ದರು. ಇಬ್ಬರ ಪತ್ತೆಗೆ ಕೊಲ್ಲೂರು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು.
ಈ ನಡುವೆ ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಕೆಲವು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ಸೋಕೋ ತಂಡ ತೆರಳಿ ಪರಿಶೀಲನೆ ನಡೆಸಿತು. ಬೈಂದೂರು ಸಿಪಿಐ ಶಿವಕುಮಾರ್, ಕೊಲ್ಲೂರು ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಬೈಂದೂರು ಪಿಎಸ್ಐ ಸುನೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗಂಗೊಳ್ಳಿ ತುರ್ತು ಸ್ಪಂದನಾ ತಂಡದ ಇಬ್ರಾಹಿಂ ಗಂಗೊಳ್ಳಿ, ವಿಲ್ಸನ್ ರೆಬೆಲ್ಲೋ ಹಾಗೂ ವಿಕಾಸ್ ಮೊಗವೀರ ಮೃತದೇಹಗಳನ್ನು ಮರದಿಂದ ಕೆಳಗಿಳಿಸಿ ಆಸ್ಪತ್ರೆಗೆ ಸಾಗಿಸಲು ಪೊಲೀಸರಿಗೆ ಸಹಕರಿಸಿದರು.
ಮರದ ಮೇಲೆ ನೇತಾಡುತ್ತಿದ್ದ ದೇಹಗಳನ್ನು ಕೆಳಗಿಳಿಸಿದ ಬಳಿಕ ಅಳಿದುಳಿದ ಭಾಗಗಳು ಹಾಗೂ ಕೆಳಗೆ ಬಿದ್ದಿದ್ದ ಅವಶೇಷಗಳನ್ನು ಸಂಗ್ರಹಿಸಿ ಪ್ಯಾಕ್ ಮಾಡಲಾಗಿದೆ. ಅವುಗಳನ್ನು ಬೈಂದೂರು ಸರ್ಕಾರಿ ಆಸ್ಪತ್ರೆಯ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




