ಜೈನ ಅಭಿವೃದ್ದಿ ನಿಗಮ ಸ್ಥಾಪನೆಗೆ ಕ್ರಮ – ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭರವಸೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜೈನ ಸಮಾಜದ ಬಹುದಿನಗಳ ಬೇಡಿಕೆಯಾಗಿರುವ ಜೈನ ಅಭಿವೃದ್ದಿ ನಿಗಮ ಸ್ಥಾಫನೆ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭರವಸೆ ನೀಡಿದರು.
ಬೆಳಗಾವಿಯ ಹಲಗಾ ಗ್ರಾಮದಲ್ಲಿ ಬುಧವಾರ ಜೈನ ಯುವ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಾಂತಿಸಾಗರ ಸಂಸ್ಕಾರ ಬಂಧನ ಶಿಬಿರದ ಎಂಟನೇಯ ದಿನದ ರ‍್ಯಾಲಿಯನ್ನು ಹಾಗೂ ಪಂಚಾಮೃತ ಅಭಿಷೇಕ ಪೂಜಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬುದು ಜೈನ ಸಮಾಜದ ಹಲವು ದಿನಗಳ ಬೇಡಿಕೆಯಾಗಿದೆ. ಆಚಾರ್ಯ ಶ್ರಿ ಸಿದ್ದಸೇನ ಮುನಿಗಳು ಮತ್ತು ಇನ್ನಿತರ ಸ್ವಾಮಿಗಳು ಸಮಾಜದ ಪ್ರಮುಖರು ಈ ಬಗ್ಗೆ ಸರಕಾರಕ್ಕೆ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಮನವಿಯನ್ನು ಆಧರಿಸಿ ಈಗಾಗಲೆ ನಿಗಮ ಸ್ಥಾಪನೆಯ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸಲಾಗಿದ್ದು, ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.

ಜೈನ ಸಮಾಜ ಅಹಿಂಸೆಯ ತತ್ವದ ಆಧಾರದ ಮೇಲೆ ನಡೆಯುತ್ತ ಬಂದಿದೆ. ಇಂದು ಈ ಸಂಸ್ಖಾರ ಬಂಧನದ ಶಿಬಿರ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ ನಂತರ ಜೈನ ಧರ್ಮದ ಬಗ್ಗೆ ಇನ್ನಷ್ಟು ಹೆಚ್ಚಿನ ಜ್ಞಾನ ಪಡೆದುಕೊಂಡಂತಾಗಿದೆ. ಅಹಿಂಸೆ, ಅಹಂ, ರಾಗ, ದ್ವೇಷಗಳ ತ್ಯಾಗ ಇವೆಲ್ಲವನ್ನು ಆಚಾರ್ಯ ಸಿದ್ದಸೇನ ಮುನಿಗಳು ಯಾತ್ರೆಯ ವೇಳೆ ತಿಳಿಸಿಕೊಟ್ಟಿದ್ದಾರೆ. ಶ್ರೀಗಳ ಹಾಗೂ ಹಲಗಾ ಗ್ರಾಮಸ್ಥರ ಬೇಡಿಕೆಯಂತೆ ಇಲ್ಲಿನ ಬಸದಿಯ ಅಭಿವೃದ್ದಿಗಾಗಿ ಈಗಾಗಲೇ ೫೦ ಲಕ್ಷ ರೂ. ಅನುದಾನ ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಇನೂ ೫೦ ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಮಾತನಾಡಿ, ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಸಾಕಷ್ಟು ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದಾರೆ. ಜೈನ ಸಮಾಜದ ಎಲ್ಲ ಬೇಡಿಕೆಗಳನ್ನು ಅವರು ಶೀಘ್ರವೇ ನೆರವೇರಿಸಲಿದ್ದಾರೆನ್ನುವ ವಿಶ್ವಾಸವಿದೆ ಎಂದರು.
ವೇದಿಕೆ ಮೇಲೆ ಭರತೇಶ ಶೀಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ರಾಜೇಂದ್ರ ಜಕ್ಕನ್ನವರ, ಸುಕುಮಾರ ಹುಡೇದ್, ಮಹಾವೀರ ಬೆಲ್ಲದ, ಸುನಿತಾ ಬೆಲ್ಲದ, ಮಹಾವೀರ ಪಾಟೀಲ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಾನಿಧ್ಯವನ್ನು ಆಚಾರ್ಯ ಶ್ರೀ ಸಿದ್ದಸೇನ ಮುನಿ ಮಹಾರಾಜರು ವಹಿಸಿ ಆರ್ಶಿವಚನ ನೀಡಿದರು. ಇದೆ ಸಂದರ್ಭದಲ್ಲಿ ಹಲಗಾ ಜೈನ ಸಮಾಜದ ವತಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಹಾಗೂ ಇನ್ನಿತರ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಸ್ಕಾರ ಬಂಧನದ ಶೋಭಾ ಯಾತ್ರೆಯು ಹಲಗಾ ಗ್ರಾಮದಲ್ಲಿ ನಡೆದು, ಕೊನೆಯಲ್ಲಿ ಬಸದಿಯಲ್ಲಿ ಪಂಚಾಮೃತ ಪೂಜೆಯೊಂದಿಗೆ ಮುಕ್ತಾಯಗೊಂಡಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ