*ಧನ್ವೀರ್‌ಗೆ ಪೊಲೀಸರಿಂದ ಮತ್ತೊಂದು ನೋಟಿಸ್*:*ನ. 12ರಂದು ವಿಚಾರಣೆಗೆ ಹಾಜರಾಗಲು ಸೂಚನೆ*

ಪ್ರಗತಿವಾಹಿನಿ ಸುದ್ದಿ: ನಟಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆಗೆ ಹಾಜರಾಗಲು ಧನ್ವೀರ್‌ಗೆ ಮತ್ತಷ್ಟು ಕಾಲಾವಕಾಶ ಸಿಕ್ಕಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿಗದಿತ ಸಮಯಕ್ಕೆ ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಮನವಿ ಮಾಡಿದ್ದ ನಟನಿಗೆ ಪೊಲೀಸರು ದಿನಾಂಕ ವಿಸ್ತರಿಸಿ ಹೊಸ ನೋಟಿಸ್ ನೀಡಿದ್ದಾರೆ.
ಈ ಹಿಂದೆ ನವೆಂಬರ್ 11ರೊಳಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಸಮಯ ನೀಡುವಂತೆ ಧನ್ವೀರ್ ಪೊಲೀಸರಿಗೆ ಪತ್ರ ಬರೆದಿದ್ದರು. ಮನವಿಯನ್ನು ಪರಿಗಣಿಸಿರುವ ಪೊಲೀಸರು ಇದೀಗ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಎರಡನೇ ನೋಟಿಸ್ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ವೈರಲ್ ಪ್ರಕರಣವೂ ಧನ್ವೀರ್‌ಗೆ ಮತ್ತೊಂದು ಸಂಕಷ್ಟ ತಂದಿದೆ. ಈ ಪ್ರಕರಣದಲ್ಲಿ ಧನ್ವೀರ್ ಅವರ ಮೊಬೈಲ್‌ನಿಂದಲೇ ವಿಡಿಯೋ ವೈರಲ್ ಆಗಿರುವುದಕ್ಕೆ ಸಾಕ್ಷ್ಯ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮೊಬೈಲ್‌ನಿಂದ ಅಳಿಸಲಾದ ಮಾಹಿತಿಯನ್ನು ಮರುಪಡೆಯಲಾಗಿದ್ದು, ಅದರ ವರದಿ ಸಿಸಿಬಿ ಪೊಲೀಸರ ಕೈ ಸೇರಿದೆ.
ಈ ಹಿಂದೆ ವಿಡಿಯೋ ವೈರಲ್ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಧನ್ವೀರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಅವರ ಮೊಬೈಲ್ ಪರಿಶೀಲಿಸಿದಾಗ ಯಾವುದೇ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಅಳಿಸಲಾದ ಡೇಟಾವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗಿತ್ತು.
ಇದೀಗ ಮೊಬೈಲ್ ರಿಟ್ರೀವ್ ವರದಿಯಲ್ಲಿ ಧನ್ವೀರ್ ಅವರ ಫೋನ್‌ನಿಂದಲೇ ವಿಡಿಯೋ ವೈರಲ್ ಆಗಿರುವುದಕ್ಕೆ ಸಾಕ್ಷ್ಯ ದೊರೆತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಬಂಧನ ವಾರಂಟ್ ಪಡೆಯಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.
ಒಂದೆಡೆ ವಿಜಯಲಕ್ಷ್ಮಿ ಪ್ರಕರಣದ ವಿಚಾರಣೆ, ಮತ್ತೊಂದೆಡೆ ಜೈಲಿನ ವಿಡಿಯೋ ವೈರಲ್ ಪ್ರಕರಣದ ತನಿಖೆ. ಹೀಗೆ ಎರಡು ಪ್ರಕರಣಗಳಿಂದ ನಟ ಧನ್ವೀರ್‌ಗೆ ಸವಾಲು ಎದುರಾಗಿದ್ದು, ನವೆಂಬರ್ 12ರ ವಿಚಾರಣೆಯಲ್ಲಿ ಅವರು ಯಾವ ಮಾಹಿತಿ ನೀಡಲಿದ್ದಾರೆ ಎಂಬ ಕುತೂಹಲ ಮೂಡಿದೆ.



