ಅತೃಪ್ತರಿಗೆ ಬಿಗ್ ಶಾಕ್; ಮತ್ತೆ 14 ಶಾಸಕರು ಅನರ್ಹ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಮೊನ್ನೆಯಷ್ಟೇ 3 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ರಮೇಶಕುಮಾರ ಇಂದು (ರವಿವಾರ) ಅತೃಪ್ತರಿಗೆ ಮತ್ತೆ ಬಿಗ್ ಶಾಕ್ ನೀಡಿದ್ದು, ಕಾಂಗ್ರೆಸ್‌ನ 11 ಹಾಗೂ ಜೆಡಿಎಸ್‌ನ 3 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದಾರೆ.
ರವಿವಾರ ಬೆಳಗ್ಗೆ ಬೆಂಗಳೂರಿನ ಶಾಸಕರ ಭವನದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.
ಕಾಂಗ್ರೆಸ್‌ನ ಬಂಡಾಯ ಶಾಸಕರಾದ ಶಿವರಾಂ ಹೆಬ್ಬಾರ್, ಪ್ರತಾಪಗೌಡ ಪಾಟೀಲ, ಭೈರತಿ ಬಸವರಾಜು, ಮುನಿರತ್ನ, ಡಾ. ಕೆ. ಸುಧಾಕರ, ಎಂಟಿಬಿ ನಾಗರಾಜು, ಆನಂದ್ ಸಿಂಗ್, ಬಿ.ಸಿ. ಪಾಟೀಲ, ಎಸ್.ಟಿ. ಸೋಮಶೇಖರ, ರೋಷನ್ ಬೇಗ್, ಶ್ರೀಮಂತ ಪಾಟೀಲ ಹಾಗೂ ಜೆಡಿಎಸ್ ಶಾಸಕರಾದ ಗೋಪಾಲಯ್ಯ, ನಾರಾಯಣ ಗೌಡ, ಎಚ್. ವಿಶ್ವನಾಥ ಅವರು ಅನರ್ಹಗೊಂಡ ಶಾಸಕರಾಗಿದ್ದಾರೆ. ಪ್ರಸ್ತುತ ೧೫ನೇ ವಿಧಾನಸಭೆ ಅವಧಿಯ ಅಂತ್ಯದವರೆಗೂ ಅಂದರೆ 2023 ರವರೆಗೆ ಈ ಅನರ್ಹಗೊಂಡ ಶಾಸಕರು ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸ್ಪೀಕರ್ ಸ್ಪಷ್ಟಪಡಿಸಿದರು.
ಸೋಮವಾರವೇ ಅಧಿವೇಶನ ಕರೆದಿರುವ ಕಾರಣ ಹೆಚ್ಚು ಸಮಯವಿರಲಿಲ್ಲ. ಹೀಗಾಗಿ ರವಿವಾರವೂ ತಾವು ಕೆಲಸ ಮಾಡಬೇಕಾಗಿ ಬಂದಿದ್ದು ತುರ್ತಾಗಿ ಶಾಸಕರ ಅನರ್ಹತೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡು ತೀರ್ಪು ಪ್ರಕಟಿಸುತ್ತಿರುವುದಾಗಿ ರಮೇಶಕುಮಾರ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಅಲ್ಲಿಗೆ ಮೊನ್ನೆ ಅನರ್ಹಗೊಂಡಿದ್ದ ಮೂವರು ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ ಹಾಗೂ ಆರ್. ಶಂಕರ್ ಅವರನ್ನು ಸೇರಿಸಿ ಇಂದು ಅನರ್ಹಗೊಂಡ 14 ಶಾಸಕರನ್ನು ಸೇರಿಸಿ ಒಟ್ಟಾರೆ 17 ಶಾಸಕರು ಅನರ್ಹಗೊಂಡಂತಾಗಿದೆ.
ಈ ಮಧ್ಯೆ ಮಾಧ್ಯಮದೊಂದಿಗೆ ಮಾತನಾಡಿದ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ ಗೌಡ ಪಾಟೀಲ ತಾವು ಸ್ಪೀಕರ್ ನಿರ್ಧಾರ ಪ್ರಶ್ನಿಸಿ ಸೋಮವಾರವೇ ಸುಪ್ರೀಂ ಕೋರ್ಟ್ ಕದ ತಟ್ಟುವುದಾಗಿ ತಿಳಿಸಿದ್ದಾರೆ.
ಸ್ಪೀಕರ್ ರಮೇಶಕುಮಾರ ತೀರಾ ಅವಸರದಲ್ಲಿ ನಿರ್ಧಾರ ಕೈಗೊಂಡಂತೆ ಕಾಣುತ್ತಿದೆ. ಅವರ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದಿದ್ದಾರೆ ಮತ್ತೋರ್ವ ಅನರ್ಹ ಶಾಸಕ ಎಚ್. ವಿಶ್ವನಾಥ್.
ಬಿ.ಎಸ್. ಯಡಿಯೂರಪ್ಪ ಹಾದಿ ಸುಗಮ? : ಸೋಮವಾರ ಬೆಳಗ್ಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿರುವ ಬಿ.ಎಸ್. ಯಡಿಯೂರಪ್ಪನವರ ಹಾದಿ ಸುಗಮವಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಒಟ್ಟು 17 ಶಾಸಕರ ಅನರ್ಹತೆಯಿಂದ ಕರ್ನಾಟಕ ವಿಧಾನಸಭೆಯ ಬಲ 207ಕ್ಕೆ ಕುಸಿದಿದ್ದು ಸರಳ ಬಹುಮತಕ್ಕೆ 104 ಮತ ಸಾಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ