ಡಿ.ಕೆ.ಶಿವಕುಮಾರ ಸೆ.17ರ ವರೆಗೆ ಇಡಿ ಕಸ್ಟಡಿಗೆ
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಅಕ್ರಮ ಆಸ್ತಿ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಅವರನ್ನು ಮತ್ತೆ 4 ದಿನಗಳ ಕಾಲ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಲಾಗಿದೆ.
ಶುಕ್ರವಾರ ಅವರ 9 ದಿನಗಳ ಇಡಿ ಕಸ್ಟಡಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇಂದು ಜಾರಿ ನಿರ್ದೇಶನಾಲಯ ಮತ್ತು ಡಿ.ಕೆ.ಶಿವಕುಮಾರ ಪರ ವಾದಗಳನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ ಅವರನ್ನು ಸೆ.17ರ ವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಯಿತು.
2016ರಲ್ಲಿ ನವದೆಹಲಿಯ ಫ್ಲ್ಯಾಟ್ ಒಂದರಲ್ಲಿ ಸಿಕ್ಕಿದ 8.59 ಕೋಟಿ ರೂ.ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಡಿ.ಕೆ.ಶಿವಕುಮಾರ ಅವರನ್ನು ವಿಚಾರಣೆಗೊಳಪಡಿಸಿದೆ. ಡಿ.ಕೆ.ಶಿವಕುಮಾರ ಬೇನಾಮಿ ಆಸ್ತಿ ಹೊಂದಿದ್ದಾರೆ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಹಾಗೂ ಅವರ ಕುಟುಂಬ ಮತ್ತು ಸ್ನೇಹಿತರನ್ನು ಇಡಿ ವಿಚಾರಣೆ ನಡೆಸುತ್ತಿದೆ.
4 ದಿನ ವಿಚಾರಣೆ ನಡೆಸಿದ ನಂತರ ಅವರನ್ನು ಬಂಧಿಸಲಾಗಿತ್ತು. ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 9 ದಿನಗಳ ಕಾಲ ತನ್ನ ವಶಕ್ಕೆ ಪಡೆದಿತ್ತು. ಇಂದಿಗೆ ಇಡಿ ಕಸ್ಟಡಿ ಅವಧಿ ಮುಕ್ತಾಯವಾಗಿತ್ತು.
ಡಿ.ಕೆ.ಶಿವಕುಮಾರ ಅವರ ಆರೋಗ್ಯ ಸರಿ ಇಲ್ಲ. ಅವರು ವಿಚಾರಣೆಗೆ ಎಲ್ಲ ರೀತಿಯಲ್ಲೂ ಸಹಕರಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಜಾಮೀನು ನೀಡಬೇಕು ಎಂದು ಅವರ ಪರ ವಕೀಲರು ವಾದಿಸಿದರು. ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ. ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುತ್ತಿಲ್ಲ. ಇನ್ನೂ ಸಾಕಷ್ಟು ವಿಚಾರಮೆ ನಡೆಸುವುದು ಬಾಕಿ ಇದೆ. ಹಾಗಾಗಿ ತಮ್ಮ ಕಸ್ಟಡಿಗೆ ಕೋಡಿ ಎಂದು ಜಾರಿ ನಿರ್ದೇಶನಾಲಯದ ಪರ ವಕೀಲರು ಕೋರಿದರು.
ಅಂತಿಮವಾಗಿ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ ಸೋಮವಾರದವರೆಗೆ ಅವಕಾಶ ನೀಡಲಾಗಿದೆ.
ಈ ಮಧ್ಯೆ, ಡಿ.ಕೆ.ಶಿವಕುಮಾರ ಬಂಧನ ಪ್ರತಿಭಟಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆದಿವೆ. ಕಾಂಗ್ರೆಸ್ ಕಾರ್ಯಕರ್ತರು, ಡಿ.ಕೆ.ಶಿವಕುಮಾರ ಅಭಿಮಾನಿಗಳು ಹಾಗೂ ಒಕ್ಕಲಿಗ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
ಇಂದು ಕೂಡ ನವದೆಹಲಿಯ ನ್ಯಾಯಾಲಯದ ಮುಂದೆ ಅಪಾರ ಪ್ರಮಾಣದಲ್ಲಿ ಡಿ.ಕೆ.ಶಿವಕುಮಾರ ಅಭಿಮಾನಿಗಳು ಸೇರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ