ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಭಾರತ-ಚೀನಾ ನಡುವೆ ಗಲ್ವಾನ್ ನಲ್ಲಿ ನಡೆದ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಗಡಿ ಭಾಗದಲ್ಲಿ ಈಗಾಗಲೇ ವಾಯುಪಡೆಗಳನ್ನು ನಿಯೋಜಿಸಲಾಗಿದ್ದು, ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ, ಯಾವುದೇ ಪರಿಸ್ಥಿತಿಯನ್ನೂ ಎದುರಿಸಲು ಸಿದ್ಧ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭದೊರಿಯಾ ತಿಳಿಸಿದ್ದಾರೆ.
ಹೈದರಾಬಾದ್’ನ ವಾಯುಪಡೆ ಅಕಾಡೆಮಿಯಲ್ಲಿ ಮಾತನಾಡಿದ ಅವರು, ಗಾಲ್ವಾನ್ ಕಣಿವೆಯಲ್ಲಿ ಗಡಿ ರಕ್ಷಣೆಗಾಗಿ ತ್ಯಾಗ ಮಾಡಿದ ಕರ್ನಲ್ ಸಂತೋಷ್ ಬಾಬು ಮತ್ತು ಅವರ ವೀರ ಪಡೆಗೆ ನಾವೆಲ್ಲರೂ ಗೌರವ ಸಲ್ಲಿಸೋಣ. ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲೂ ಹೋರಾಡಿದ ಧೈರ್ಯಶಾಲಿಗಳ ಶೌರ್ಯ, ಭಾರತದ ಸಾರ್ವಭೌಮತ್ವವನ್ನು ಯಾವುದೇ ಹಂತಲ್ಲೂ ರಕ್ಷಿಸುವ ನಮ್ಮ ಸಂಕಲ್ಪವನ್ನು ಪ್ರದರ್ಶಿಸುತ್ತೆವೆ ಎಂದರು.
ಈ ಅವಧಿಯಲ್ಲಿ ಚೀನಾ ದೇಶ ತರಬೇತಿಗೆಂದು ಸಾಕಷ್ಟು ಯುದ್ಧ ವಿಮಾನಗಳನ್ನ ಅಣಿಗೊಳಿಸುತ್ತದೆ. ಆದರೆ, ಈ ಬಾರಿ ಇದರ ಪ್ರಮಾಣ ಸಾಕಷ್ಟು ಹೆಚ್ಚಿದೆ. ನಮಗೇನಾದರೂ ಅನುಮಾನ ಬರುವಂಥ ಚಟಿವಟಿಕೆ ಗಮನಕ್ಕೆ ಬಂದರೆ ನಾವೂ ಕೂಡ ನಮ್ಮ ವಿಮಾನಗಳನ್ನ ನಿಯೋಜಿಸಿ ಪರಿಸ್ಥಿತಿ ಪರಿಶೀಲಿಸುತ್ತೇವೆ. ಎಲ್ಎಸಿ ಅಥವಾ ಏನೇ ಇರಲಿ, ನಮಗೆ ಈಗಿರುವ ಸನ್ನಿವೇಶ ಸ್ಪಷ್ಟವಾಗಿ ತಿಳಿದಿದೆ. ಎದುರಾಳಿಗಳ ವಾಯುಪಡೆ ನಿಯೋಜನೆಯನ್ನೂ ನಾವು ಗಮನಿಸುತ್ತಿದ್ದೇವೆ ಎಂದು ತಿಳಿಸಿದರು.
ಲೆಹ್ನಿಂದ ಹಶಿಮಾರಾದವರೆಗೆ ಚೀನಾದ ಗಡಿ ಭಾಗದುದ್ದಕ್ಕೂ ಇರುವ ಭಾರತೀಯ ವಾಯುನೆಲೆಗಳನ್ನ ಜಾಗೃತ ಸ್ಥಿತಿಯಲ್ಲಿಡಲಾಗಿದ್ದು, ಚೀನಾ ವಾಯುನೆಲೆಗಳ ಮೇಲೂ ಹದ್ದಿನ ಕಣ್ಣಿಡಲಾಗಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ