ಪ್ರಗತಿವಾಹಿನಿ ಸುದ್ದಿ, ಧಾರವಾಡ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿಯ ಸಭೆಯು ಇಂದು ಧಾರವಾಡದಲ್ಲಿ (ಕರ್ನಾಟಕ) ಸರಸಂಘಚಾಲಕ ಡಾ. ಮೋಹನ್ ಭಾಗವತ್ ಮತ್ತು ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಅವರು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಪ್ರಾರಂಭವಾಯಿತು.
ದೇಶದಾದ್ಯಂತದಿಂದ ಆಗಮಿಸಿರುವ ಎಲ್ಲ ಪ್ರಾಂತಗಳ ಹಾಗೂ ಕ್ಷೇತ್ರಗಳ ಸಂಘಚಾಲಕ, ಕಾರ್ಯವಾಹ, ಪ್ರಚಾರಕ, ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರು ಮತ್ತು ಕೆಲ ಆಯ್ದ ಸಂಘಟನೆಗಳ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳು ಸೇರಿದಂತೆ ಸುಮಾರು 350 ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ಸಭೆಯಲ್ಲಿ ಸಂಘದ ಕಾರ್ಯದ ಪ್ರಸ್ತುತ ಸ್ಥಿತಿಗತಿ, ಕಾರ್ಯ ವಿಸ್ತಾರ ಹಾಗೂ ಕಾರ್ಯಕರ್ತರ ವಿಕಾಸದ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ. ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ನಡೆದ ಹಿಂದೂಗಳ ಮೇಲಿನ ಹಿಂಸಾಚಾರದ ಬಗ್ಗೆ ನಿರ್ಣಯವನ್ನು ಅಂಗೀಕರಿಸಲಾಗುವುದು.
ಸಭೆಯ ಆರಂಭದಲ್ಲಿ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದರಲ್ಲಿ ಸಂಸ್ಕಾರ ಭಾರತಿಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಮೀರ್ ಚಂದ್, ಕನ್ನಡ ಲೇಖಕರಾದ ಜಿ. ವೆಂಕಟಸುಬ್ಬಯ್ಯ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಪತ್ರಕರ್ತ ಎಚ್.ಎಸ್. ದೊರೆಸ್ವಾಮಿ, ಖ್ಯಾತ ಕವಿ ಡಾ. ಎಚ್. ಸಿದ್ದಲಿಂಗಯ್ಯ, ರಾಜಕಾರಣಿ ಶ್ರೀ ಆಸ್ಕರ್ ಫೆರ್ನಾಂಡೀಸ್, ಸ್ವಾಮಿ ಅಧ್ಯಾತ್ಮಾನಂದ ಜಿ, ಸ್ವಾಮಿ ಓಂಕಾರಾನಂದ್ ಜಿ, ಸ್ವಾಮಿ ಅರುಣಗಿರಿ ಜಿ, ಹಿರಿಯ ಪತ್ರಕರ್ತ ಶ್ಯಾಮ್ ಖೋಸ್ಲಾ, ದೈನಿಕ್ ಜಾಗರಣ್ ಮಾಲೀಕ ಯೋಗೇಂದ್ರ ಮೋಹನ್ ಗುಪ್ತಾ, ಗೀತಾ ಪ್ರೆಸ್ ಗೋರಖ್ಪುರ ಅಧ್ಯಕ್ಷ ರಾಧೇಶ್ಯಾಮ್ ಖೆಮ್ಕಾ, ಲೇಖಕರು ನರೇಂದ್ರ ಕೊಹ್ಲಿ, ರಾಜೇಶ್ ಸತವ್, ರಾಜ್ಯಸಭಾ ಸಂಸದ (ಕಾಂಗ್ರೆಸ್), ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ, ಮಾಜಿ ರಾಜ್ಯಪಾಲ ಜಗಮೋಹನ್, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ರೀ ಕಲ್ಯಾಣ್ ಸಿಂಗ್, ಪತ್ರಕರ್ತ ರೋಹಿತ್ ಸರ್ದಾನ, ಶ್ರೀ ಸುಂದರ್ ಲಾಲ್ ಬಹುಗುಣ (ಚಿಪ್ಕೋ ಚಳವಳಿ) ), ಅಖಾಡಾ ಪರಿಷತ್ತಿನ ಅಧ್ಯಕ್ಷರು ಮಹಂತ್ ನರೇಂದ್ರ ಗಿರಿ ಜಿ ಮಹಾರಾಜ್, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಪ್ರಮುಖರಾಗಿದ್ದಾರೆ.
ಸಭೆಯು ಅಕ್ಟೋಬರ್ 30 ರಂದು ಸಂಜೆ ಮುಕ್ತಾಯಗೊಳ್ಳಲಿದೆ.
ಕನ್ನಡ ಗೀತಗಾಯನ: ಮುಗಿಲು ಮುಟ್ಟಿದ ಕನ್ನಡ ಡಿಂಡಿಮ…
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ