Belagavi NewsBelgaum NewsKannada NewsKarnataka NewsLatest

*ದುರುದ್ದೇಶದಿಂದಲೇ Form-7 ನಲ್ಲಿ ಸಹಿ ಸಂಗ್ರಹ ಆರೋಪ: ತನಿಖೆಗೆ ಆಗ್ರಹಿಸಿದ ಎಸ್‌ಡಿಪಿಐ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ನಗರದ ವೀರಭದ್ರ ನಗರದ ಉರ್ದು ಮಾಧ್ಯಮ ಶಾಲೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸುವ ಉದ್ದೇಶದಿಂದ Form-7 ಅರ್ಜಿಗಳಿಗೆ ಮತದಾರರಿಂದ ಸಹಿ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳಗಾವಿ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಸೋಮವಾರ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಕಾರ್ಯಕರ್ತರು ಜಿಲ್ಲಾಧಿಕಾರಿಗ ಕಚೇರಿಗೆ ಮನವಿ ಸಲ್ಲಿಸಿದರು. 

ಕೆಲವರು ತಮ್ಮನ್ನು ಮಹಾನಗರ ಪಾಲಿಕೆ ಸಿಬ್ಬಂದಿ ಎಂದು ಪರಿಚಯಿಸಿಕೊಂಡು, BLO ಹಾಗೂ ಚುನಾವಣಾ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು Form-7 ಅರ್ಜಿಗಳಿಗೆ ಸಹಿ ಪಡೆಯುತ್ತಿದ್ದಾರೆ ಎಂಬ ದೂರುಗಳು ಬಂದಿವೆ ಎಂದು SDPI ತಿಳಿಸಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಥವಾ ಸ್ಥಳೀಯ ಮುಖಂಡರು ಅಧಿಕಾರಿಗಳೊಂದಿಗೆ ಸೇರಿಕೊಂಡು ಸಹಿ ಸಂಗ್ರಹದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ ಎಂದು ಸಂಘಟನೆ ಹೇಳಿದೆ.

ಮತದಾರರ ಅರಿವಿಗೆ ಬಾರದ ರೀತಿಯಲ್ಲಿ ಅಥವಾ ತಪ್ಪು ಮಾಹಿತಿ ನೀಡಿ Form-7ಗೆ ಸಹಿ ಪಡೆಯಲಾಗಿದ್ದರೆ, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಅನಧಿಕೃತ ಅಥವಾ ದುರುದ್ದೇಶಪೂರ್ವಕ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯಿಂದ ತೆಗೆದುಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು SDPI ಒತ್ತಾಯಿಸಿದೆ.

ವೀರಭದ್ರನಗರ ಉರ್ದು ಮಾಧ್ಯಮ ಶಾಲೆಯಲ್ಲಿ ನಡೆದಿರುವುದಾಗಿ ಆರೋಪಿಸಲಾಗಿರುವ ಸಹಿ ಸಂಗ್ರಹದ ಕುರಿತು ಸ್ವತಂತ್ರ ತನಿಖೆ ನಡೆಸಬೇಕು. Form-7ಗೆ ಸಹಿ ಮಾಡಿರುವ ಮತದಾರರಿಂದ ಹೇಳಿಕೆ ಪಡೆದು, ಅವರು ಯಾವ ಉದ್ದೇಶಕ್ಕಾಗಿ ಸಹಿ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಬೇಕು. ಅಲ್ಲದೆ, ತಮ್ಮನ್ನು ಪಾಲಿಕೆ ಸಿಬ್ಬಂದಿ ಎಂದು ಪರಿಚಯಿಸಿಕೊಂಡವರ ಗುರುತು ಹಾಗೂ ಅಧಿಕಾರವನ್ನು ಪರಿಶೀಲಿಸಿ, ತಪ್ಪಿತಸ್ಥರು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

BLO ಅಥವಾ ಚುನಾವಣಾ ಅಧಿಕಾರಿಗಳ ಹೆಸರನ್ನು ಅನಧಿಕೃತವಾಗಿ ಬಳಸಿರುವುದು ತನಿಖೆಯಲ್ಲಿ ಸಾಬೀತಾದರೆ, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕು. 

ಅನುಮಾನಾಸ್ಪದ Form-7 ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸದೆ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಬಾರದು. ಬೆಳಗಾವಿ ಜಿಲ್ಲೆಯಾದ್ಯಂತ ಸಲ್ಲಿಕೆಯಾಗಿರುವ Form-7 ಅರ್ಜಿಗಳ ಬಗ್ಗೆಯೂ ವಿಶೇಷ ಪರಿಶೀಲನೆ ನಡೆಸಬೇಕು.

ಈ ಸಂಬಂಧ ಜಿಲ್ಲಾಡಳಿತ ಹಾಗೂ ಚುನಾವಣಾ ಅಧಿಕಾರಿಗಳು ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವಂತೆ ತಕ್ಷಣ ತನಿಖೆ ನಡೆಸಬೇಕು ಎಂದು SDPI ಬೆಳಗಾವಿ ಜಿಲ್ಲಾ ಅಧ್ಯಕ್ಷ ಮೊಅಝಮ್ಜಾ ಮುಲ್ಲಾನಿ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಮೊಅಝಮ್ಜಾ ಮುಲ್ಲಾನಿ, ಜಿಲ್ಲಾ ಕಾರ್ಯದರ್ಶಿ ಮುಜಫರ್ ಭಗವಾನ, ಮಾಜೀದ್ ಶೇಖ್, ಜಿಲ್ಲಾ ಸಮಿತಿ ಸದಸ್ಯರಾದ ಇಮ್ರಾನ್ ಅತ್ತಾರ, ಮುದ್ದಸರ್ ಹುಕ್ಕೇರಿ, ಇಸ್ಮಾಯಿಲ್ ವನ್ನೂರ್, ಸಮೀರ್ ಇನಾಂದಾರ್, ಅಸದ ಜೂಟದಾರ್, ಮಲಿಕಜಾನ ಮುಲ್ಲಾ, ಅಲ್ತಾಫ್ ಮುಜಾವರ್, ಕೈಫ ಹರ್ಲಾಪುರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button