*ಪ್ರಾರ್ಥನೆಗೆ ಬಂದ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ*: *ಫಾದರ್ ವಿರುದ್ಧ ಪೋಕ್ಸೋ ಕೇಸ್!*

ಪ್ರಗತಿವಾಹಿನಿ ಸುದ್ದಿ: ಪ್ರಾರ್ಥನೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕನಿಗೆ ಚಾಕಲೇಟ್ ನೀಡಿ ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಬಾಲಕನ ದೂರಿನ ಆಧಾರದಲ್ಲಿ ಚರ್ಚ್ನ ಫಾದರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನು ಬಾಲಕನ ಸ್ನೇಹಿತರಿಗೂ ಇದೇ ರೀತಿಯ ಕಿರುಕುಳ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂಬ ಆರೋಪ ಪ್ರಕರಣಕ್ಕೆ ಮತ್ತಷ್ಟು ಗಂಭೀರತೆಯನ್ನು ತಂದಿದೆ.
ದೂರಿನ ಪ್ರಕಾರ, ಅಪ್ರಾಪ್ತ ಬಾಲಕ ಪ್ರಾರ್ಥನೆಗೆ ತೆರಳುತ್ತಿದ್ದಾಗ ಫಾದರ್ ಸಿಪ್ರಿಯನ್ ಪಿಂಟೋ ಚಾಕಲೇಟ್ ನೀಡಿ ಬಾಲಕನನ್ನು ಕೊಠಡಿಗೆ ಕರೆದುಕೊಂಡು ಹೋಗಿ ಅನುಚಿತವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ನಂತರದ ದಿನಗಳಲ್ಲೂ ಪ್ರಾರ್ಥನೆಗೆ ಹೋದಾಗ ಕಿರುಕುಳ ಮುಂದುವರಿದಿತ್ತು ಎಂದು ಆರೋಪಿಸಲಾಗಿದೆ. ಆಗಸ್ಟ್ 14ರಂದು ಸಂಜೆ ಸುಮಾರು 6.30ರ ವೇಳೆಗೆ ರಿಸೆಪ್ಷನ್ ಕೊಠಡಿಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವೂ ದೂರಿನಲ್ಲಿದೆ. ಈ ಘಟನೆ ಮಂಗಳೂರಿನ ವೆಲೆನ್ಸಿಯಾದಲ್ಲಿರುವ ಚರ್ಚ್ನಲ್ಲಿ ನಡೆದಿದೆ.
ಬಾಲಕ ತನ್ನ ಸ್ನೇಹಿತರೊಂದಿಗೆ ಈ ಬಗ್ಗೆ ಮಾತನಾಡಿದಾಗ, ಇನ್ನೂ ಕೆಲ ಬಾಲಕರಿಗೂ ಇದೇ ರೀತಿಯ ಕಿರುಕುಳ ನೀಡಿರುವುದು ತಿಳಿದುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಆತಂಕಗೊಂಡ ಬಾಲಕ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಬಳಿಕ ಪೋಷಕರು ಬಿಷಪ್ರನ್ನು ಭೇಟಿಯಾಗಿ ಘಟನೆ ವಿವರಿಸಿದ್ದು, ಪೊಲೀಸರಿಗೆ ದೂರು ನೀಡುವಂತೆ ಸಲಹೆ ಸಿಕ್ಕ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿರುವಂತೆ, ಫಾದರ್ ಸಿಪ್ರಿಯನ್ ಪಿಂಟೋ ವಿರುದ್ಧ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (POCSO) 2012ರ ಕಲಂ 8 ಮತ್ತು 10 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 75(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




