*ನಿವೃತ್ತ ಅಬಕಾರಿ ಅಧಿಕಾರಿಗೆ ಹಾಗೂ ಮಗಳಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಕೋರ್ಟ್*: *ಏನಿದು ಹಗರಣ?*

ಪ್ರಗತಿವಾಹಿನಿ ಸುದ್ದಿ: ಪ್ರಕರಣವೊಂದರಲ್ಲಿ ನಿವೃತ್ತ ಅಬಕಾರಿ ಅಧಿಕಾರಿ ಎಂ. ರಾಮಚಂದ್ರ ಮತ್ತು ಅವರ ಮಗಳು ಆರ್. ಯುವರೇಖಾ ಅವರಿಗೆ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದೆ.
ನಿವೃತ್ತ ಅಬಕಾರಿ ಅಧಿಕಾರಿ ರಾಮಚಂದ್ರಗೆ 5 ವರ್ಷ, ಯುವರೇಖಾಗೆ 3 ವರ್ಷ ಜೈಲು ಶಿಕ್ಷೆ ನೀಡಿದ್ದು, ಅಕ್ರಮವಾಗಿ ಗಳಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿದೆ. ಆರ್ಥಿಕ ಅಪರಾಧಗಳು ದೇಶದ ಆರ್ಥಿಕತೆಗೆ ಹಾನಿಕರ ಎಂದು ನ್ಯಾಯಾಲಯ ಹೇಳಿದೆ.
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಅಬಕಾರಿ ಗಾರ್ಡ್ (ಇನ್-ಚಾರ್ಜ್ ಸಬ್-ಇನ್ಸ್ಪೆಕ್ಟರ್) ಎಂ. ರಾಮಚಂದ್ರ ಹಾಗೂ ಅವರ ಮಗಳು ಆರ್. ಯುವರೇಖಾ ಅವರಿಗೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದೆ.
ಆರೋಪಿ ಎಂ. ರಾಮಚಂದ್ರಗೆ ನ್ಯಾಯಾಲಯವು 5 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಆರೋಪಿ ಆರ್. ಯುವರೇಖಾಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 3 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 8(5) ರ ಅಡಿಯಲ್ಲಿ, ಅಕ್ರಮವಾಗಿ ಗಳಿಸಿದ ಅಪರಾಧದ ಹಣದಿಂದ ಖರೀದಿಸಲಾಗಿದ್ದ ಪ್ರಮುಖ ಸ್ಥಿರಾಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರ್ಟ್ ಆದೇಶಿಸಿದೆ.
ಜಪ್ತಿಗೊಂಡ ಆಸ್ತಿಗಳು ಯಾವುದು ಎಂಬ ಮಾಹಿತಿಯನ್ನು ಕೂಡ ಕೋರ್ಟ್ ನೀಡಿದೆ. ಬೆಂಗಳೂರಿನ ವಿಜಯನಗರದಲ್ಲಿರುವ 30×51 ಅಳತೆಯ ಮನೆ ಹಾಗೂ ಅದರ ಹಿಂಭಾಗದಲ್ಲಿ ನಿರ್ಮಿಸಲಾದ ಮೂರು ಮಹಡಿಯ 1 ಬಿಎಚ್ಕೆ ಮನೆಗಳು. ಕೆಂಗೇರಿಯ ಹಳೇಗೆರೆಹಳ್ಳಿಯಲ್ಲಿರುವ ಎರಡು ವಸತಿ ನಿವೇಶನಗಳು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಕುಟ್ಟವಾಡಿ ಗ್ರಾಮದಲ್ಲಿರುವ 12 ಗುಂಟೆ ಕೃಷಿ ಜಮೀನು ಜಪ್ತಿ ಮಾಡಲು ಆದೇಶವನ್ನು ನೀಡಿದೆ.
1977 ರಿಂದ 2009 ರವರೆಗಿನ ಪರಿಶೀಲನಾ ಅವಧಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ್ದಾರೆಂದು 2009 ರಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಬಳಿಕ 2012 ರಲ್ಲಿ ರೂ. 1.79 ಕೋಟಿ ಮೊತ್ತದ ಬಗ್ಗೆ ಲೋಕಾಯುಕ್ತ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು. ಸಿಟಿ ಮಾರ್ಕೆಟ್ ವಲಯದಲ್ಲಿ ಇನ್-ಚಾರ್ಜ್ ಸಬ್-ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದ ರಾಮಚಂದ್ರ, ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಆದಾಯಕ್ಕೂ ಮೀರಿ ಆಸ್ತಿ ಸಂಪಾದಿಸಿರುವುದು ಮತ್ತು ತನ್ನ ಮಗಳ ಹೆಸರಿನಲ್ಲೂ ಆಸ್ತಿಗಳನ್ನು ಖರೀದಿಸಿರುವುದು ತನಿಖೆಯಲ್ಲಿ ಸಾಬೀತಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



