– ರವಿ ಕರಣಂ: ಭಾರತವು ಮೂರು ಕಡೆಗೂ ಸಮುದ್ರವನ್ನು ಹೊಂದಿದ್ದು ಉತ್ತರ ಭಾಗದಲ್ಲಿ ಹಿಮಾಲಯವನ್ನು ಹೊಂದಿದೆ ಇದರ ಬಗ್ಗೆ ಈಗಾಗಲೇ ನೀವು ಓದಿದ್ದೀರಿ. ತಿಳಿದಿದ್ದೀರಿ. ಭಾರತದ ಪಶ್ಚಿಮ ಭಾಗದಲ್ಲಿ ಅರಬ್ಬಿ ಸಮುದ್ರ ಪೂರ್ವ ಭಾಗದಲ್ಲಿ ಬಂಗಾಳಕೊಲ್ಲಿ ಹಾಗೂ ದಕ್ಷಿಣದಲ್ಲಿ ಹಿಂದೂ ಮಹಾಸಾಗರವನ್ನು ಒಳಗೊಂಡಿದೆ. ಅಸಂಖ್ಯಾತ ನದಿಗಳು ಬಂಗಾಳ ಮತ್ತು ಅರಬ್ಬಿ ಸಮುದ್ರವನ್ನು ಸೇರುವುದು ನಮಗೆ ತಿಳಿದ ವಿಷಯವೇ.
ಅರಬ್ಬಿ ಸಮುದ್ರ ಎಂದು ನಾವೇನು ಕರೆಯುತ್ತಿದ್ದೇವೆಯೋ ಅದನ್ನು ಹಿಂದೆ ನಮ್ಮ ಜನರು ‘ಸಿಂಧೂ ಸಾಗರ’ ಎಂದು ಕರೆಯುತ್ತಿದ್ದರು. ಸಿಂಧೂ,ನರ್ಮದ,ತಪತಿ ಮುಂತಾದ ಪ್ರಮುಖ ನದಿಗಳು ಈ ಸಮುದ್ರವನ್ನು ಸೇರುತ್ತವೆ.ಅರಬ್ಬರು ಈ ಸಮುದ್ರದಲ್ಲಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುತ್ತಾರೆ. ಅದಕ್ಕಾಗಿ ಅರಬ್ಬೀ ಸಮುದ್ರ ಎಂಬ ಹೆಸರು ಬಂದಿದೆ.
ಗುಜರಾತ್,ಮಹಾರಾಷ್ಟ್ರ,ಗೋವಾ,ಕರ್ಣಾಟಕ, ಕೇರಳ ರಾಜ್ಯಗಳು ಇದಕ್ಕೆ ಹತ್ತಿಕೊಂಡಿವೆ. ಮಹಾರಾಷ್ಟ್ರದ ಭಾಗಕ್ಕೆ ಕೊಂಕಣ ಕರ್ನಾಟಕದ ಭಾಗಕ್ಕೆ ಕರಾವಳಿ, ಕೇರಳದ ಭಾಗಕ್ಕೆ ಮಲಬಾರ್ ಎಂಬೀ ಹೆಸರುಗಳ ಮೂಲಕ ಗುರುತಿಸಲಾಗುತ್ತದೆ.ಇದರ ತಡಿಗಳು ವೈಶಿಷ್ಟ್ಯಗಳಿಂದ ಕೂಡಿವೆ. ಅದರಂತೆಯೇ ಕರ್ಣಾಟಕದ ಹಲವು ಕಡಲ ತೀರಗಳಿವೆ. ಇಡೀ ಕರಾವಳಿ ತೀರವೇ ಸೌಂದರ್ಯದ ಗುಡಿಯಂತಿದೆ. ಅದರಲ್ಲಿ ಬೇಧಗಳಿಲ್ಲ. ಇಲ್ಲಿ ಕೆಲವನ್ನು ಮಾತ್ರ ಕೊಡಲಾಗಿದೆ.
ಉಡುಪಿ ಶ್ರೀ ಕೃಷ್ಣನ ಆರಾಧನೆಯ ನೆಲೆ. 1997 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ವಿಭಜಿತವಾಗಿ ಪ್ರತ್ಯೇಕ ಜಿಲ್ಲೆಯಾಯಿತು. ಕಾಪು, ಉಡುಪಿಯಿಂದ 15 ಕಿ ಮೀ ಅಂತರದಲ್ಲಿದೆ. ಇಲ್ಲಿ ಕಡಲ ದೀಪ ಸ್ಥಂಭ (Light house) ಇದ್ದು, 130 ಅಡಿ ಎತ್ತರವಿದೆ. ಇದನ್ನು 1901 ರಲ್ಲಿ ಕಟ್ಟಲಾಗಿದೆ. ಅದ್ಭುತ ಅನುಭವ, ಮನಸಿಗೆ ಮುದ ನೀಡುವ ದೃಶ್ಯ. ರಮಣೀಯತೆಗೆ ಬೆರಗಾಗದ ಮನಸುಗಳಿಲ್ಲ. ಸಂಜೆಯ ಸಮಯದಲ್ಲಂತೂ ನಮ್ಮನ್ನು ಮತ್ತೊಂದು ಜಗಕ್ಕೆಳೆದುಕೊಂಡು ಹೋದಂತೆ ಭಾಸವಾಗುತ್ತದೆ.
ಹೊನ್ನಾವರ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬೆಟ್ಟ ಗುಡ್ಡಗಳಡಿಯಲ್ಲಿನ ಕಲ್ಲುಗಳು ಅಲ್ಲಲ್ಲಿ ರಾಶಿ ಮಲಗಿರುವುದು. ಭುವಿಯ ಮೇಲಿನ ಚಿತ್ತಾರವಂತೂ ಮರೆಯದಂತೆ ಮಾಡುತ್ತದೆ. ಸಂಜೆಯ ಸೂರ್ಯಾಸ್ತದಲ್ಲಿ ಅದರ ಕೆಂಪು ಬಾನಲ್ಲಿ, ಮೂಡಿ ಸಮುದ್ರದ ಮೇಲೆ ತಿಳಿಗೆಂಪು ಹಾಸಿಗೆಯ ಹೊದಿಸಿದಂತೆ ಕಾಣುತ್ತದೆ.
ಇದೂ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು. ಅಂಕೋಲಾ 1931 ರ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಉಪ್ಪನ್ನು ತಯಾರಿಸಿ, ಬ್ರಿಟಿಷ್ ರಿಗೆ ಸೆಡ್ಡು ಹೊಡೆದದ್ದು ನೆನಪಿಗೆ ಬರುತ್ತದೆ. ಇಲ್ಲಿರುವ ಕಡಲ ತೀರ, ಕಲ್ಲು ಬೆಟ್ಟ ಗುಡ್ಡಗಳಿಂದ ವಿನೂತನವಾಗಿ ಕಾಣುತ್ತದೆ. ಸೌಂದರ್ಯದ ತವರಂತಿರುವ ಅರಬ್ಬೀ ಸಮುದ್ರವನ್ನು ಬೆಳಗಿನ ಮತ್ತು ಇಳಿ ಸಂಜೆಯಲ್ಲಿ ನೋಡುವುದನ್ನು ಮರೆಯಬೇಡಿ.
ಭಟ್ಕಳ ಇದು ಉತ್ತರ ಕನ್ನಡ ಜಿಲ್ಲೆಯ ತಾಲೂಕು ಕೇಂದ್ರ. ಒಂದು ಬದಿ ಸಮುದ್ರ ಮತ್ತೊಂದು ಬದಿ ಕೊಡಚಾದ್ರಿ ಸಮೀಪವಾಗುತ್ತದೆ. ಹೋಗುತ್ತಿದ್ದಂತೆಯೇ ಗೋವಾದ ಬೀಚ್ ಗಳಂತೆಯೇ ಕಾಣುತ್ತದೆ. ತೀರದ ತೆಂಗಿನ ಮರಗಳೆಲ್ಲ ವಾತಾವರಣದ ಆಹ್ಲಾದಕರವನ್ನು ಹೆಚ್ಚಿಸುತ್ತವೆ.ತುಸು ಹೊತ್ತು ವಿಶ್ರಾಂತಿ ಪಡೆಯಲು ಸೂಕ್ತ ಸ್ಥಳ.
ಮಂಗಳೂರು ಪ್ರಾಚೀನ ಕಾಲದಿಂದಲೂ ವ್ಯಾಪಾರದ ಬಂದರು ಕೇಂದ್ರ. ಇದು ವಿದೇಶಗಳಿಗೆ ಸಮುದ್ರ ಯಾನದ ಮೂಲಕ ಹಲವು ಖಂಡಗಳಿಗೆ ಸಂಪರ್ಕ ಮಾಡಿ ಕೊಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನ. ಈ ಪ್ರದೇಶ ಇಂದಿಗೂ ಜನಪ್ರಿಯ . ರಾಜ ಮಹಾರಾಜರು ವಿದೇಶಗಳೊಂದಿಗೆ ವಾಣಿಜ್ಯ ವ್ಯವಹಾರ ಮಾಡಿಕೊಂಡು ಬಂದಿರುವುದು ಗೊತ್ತಿದೆ. ಇಲ್ಲಿನ ಬಂದರು ದೊಡ್ಡದಾಗಿಯೂ ಸುಂದರವಾಗಿಯೂ ಇದೆ. ನಿಮ್ಮ ಪ್ರವಾಸದ ಪಟ್ಟಿಯಲ್ಲಿ ಇದನ್ನು ಸೇರಿಸಿ, ಭೇಟಿ ಕೊಡಿ.
ರವೀಂದ್ರನಾಥ ಟಾಗೋರ್ ಕಡಲ ತೀರ. ನೀವು ಕಾರವಾರಕ್ಕೆ ಎದುರಾಗುತ್ತಿದ್ದಂತೆಯೇ ನಯನ ಮನೋಹರ ಕಡಲು ಸಿಕ್ಕುತ್ತದೆ. ಜಿಲ್ಲಾಡಳಿತ ಕಛೇರಿಯ ಎದುರಿನಲ್ಲೇ ಬೀಚ್ ಇದೆ. ಇದು ತುದಿಯಲ್ಲಿಯೇ ಆಳವಿದ್ದು ಅಪಾಯಕಾರಿಯಾಗಿದೆ. ಪ್ರತಿ ವರ್ಷ ಪ್ರವಾಸಕ್ಕೆ ಬರುವ ಮಂದಿ, ಮೋಜು ಮಸ್ತಿ ಮಾಡಲು ಕಡಲಿಗಿಳಿಯುತ್ತಾರೆ. ಅಲೆಗಳ ಆರ್ಭಟ ಮತ್ತು ರಭಸಕ್ಕೆ ಸಿಕ್ಕು, ಅದರೊಡಲಿಗೆ ಆಹಾರವಾಗಿ ಬಿಡುತ್ತಾರೆ. ಹಾಗಾಗಿ ಎಚ್ಚರಿಕೆಯಿಂದ ಸಂತೋಷ ಅನುಭವಿಸಬೇಕು. ಕಾರವಾರದಲ್ಲಿ ಬಂದರು ಇದ್ದು, ದೇಶ ವಿದೇಶಗಳ ಹಡಗುಗಳು ಲಂಗರು ಹಾಕುತ್ತವೆ.
ಮಲ್ಪೆ ಉಡುಪಿಯಿಂದ ಎಂಟು ಕಿಲೋಮೀಟರ್ ಅಂತರದಲ್ಲಿ ಇದೆ. ಇದು ಮತ್ಸ್ಯೋದ್ಯಮಕ್ಕೆ ತುಂಬಾ ಪ್ರಸಿದ್ಧಿಯಾಗಿದೆ. ತುದಿಯಲ್ಲಿ ಹಸಿತಿನ ಸಿರಿ, ತೀರದಲ್ಲಿ ಕಲ್ಲು ಕೊರೆಗಳಿದ್ದು, ಮನೋಹರ ದೃಶ್ಯ ಕಂಡು ಬರುತ್ತದೆ. ನೀವು ಉಡುಪಿಗೆ ಬಂದೇ ಬರುತ್ತೀರಿ. ಸಮಯದ ಬಿಡುವು ಮಾಡಿಕೊಂಡು, ಕುಟುಂಬ ಸಮೇತ ಹೋಗಿರಿ. ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳಿರಿ. ಇಲ್ಲಿ ಹಲವಾರು ಚಿತ್ರಗಳ ಚಿತ್ರೀಕರಣವು ನಡೆದಿದೆ. ನೋಡಲು ಸುಂದರವಾಗಿದೆ.
ಮರವಂತೆ ಇದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಿಂದ ಇಪ್ಪತ್ತೊಂದು ಕಿ ಮೀ ಅಂತರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಿದೆ. ನೀಲಿ, ಹಸಿರುಮಯ ಜಗತ್ತು ಇದಾಗಿದೆ. ಪ್ರವಾಸಿಗರ ಮೋಜಿಗೆ ಹೇಳಿ ಮಾಡಿಸಿದ ತಾಣದಂತಿದೆ. ಉತ್ತಮವಾದ ರಸ್ತೆಯಿದ್ದು ನಿಮ್ಮ ಪ್ರಯಾಣ ಸುಗಮವಾಗಿ ಸಾಗುತ್ತದೆ.
ಸುರತ್ಕಲ್ ಮಂಗಳೂರು ಜಿಲ್ಲೆಯ ಪ್ರಮುಖ ಬೀಚ್ ಗಳಲ್ಲಿ ಒಂದಾಗಿದೆ.ನವ ಮಂಗಳೂರು ಬಂದರಿನಿಂದ ಕೇವಲ ಆರು ಕಿ ಮೀ ಗಳ ಅಂತರದಲ್ಲಿದೆ. ಇದರ ಮೂರು ಕಿ ಮೀ ಸಮೀಪದಲ್ಲಿ ಕೃಷ್ಣಾಪುರ ಮಠವಿದೆ. ಇದು ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಧಾರ್ಮಿಕ ಕೇಂದ್ರವೊಂದಿದೆ. ಸುರತ್ಕಲ್ ಪ್ರದೇಶವು ಯುರೋಪಿಯನ್ನರ ಆಗಮನ ಮತ್ತು ನೆಲೆ ನಿಲ್ಲುವ ವಿಷಯ ಓದುವಾಗ ಈ ಸ್ಥಳದ ಹೆಸರನ್ನು ಬಿಡುವಂತೆಯೇ ಇಲ್ಲ. ಅವರ ವ್ಯಾಪಾರ ವಹಿವಾಟುಗಳು ಇಲ್ಲಿ ಹೇರಳವಾಗಿ ನಡೆದಿದೆ.
ಉಳ್ಳಾಲ ಎಂದ ಕೂಡಲೇ ರಾಣಿ ಅಬ್ಬಕ್ಕ ದೇವಿಯು ನೆನಪಿಗೆ ಬಂದಿದ್ದೇ ಆದರೆ, ಇತಿಹಾಸದ ಮೇಲಿನ ನಿಮ್ಮ ಪ್ರೇಮ ಅನಾವರಣವಾಗುತ್ತದೆ. ಪೋರ್ಚುಗೀಸ್ ರ ಹಡಗುಗಳಿಗೆ ತೈಲವೆರೆದು, ಬೆಂಕಿ ಹಚ್ಚಿ, ದಂಗು ಬಡಿಸಿ, ಅವರ ಆಕ್ರಮಣಕ್ಕೆ ತಕ್ಕ ಉತ್ತರ ನೀಡಿದ ದೇಶ ಪ್ರೇಮಿಗಳ ನೆಲವಿದು.ಇದು ಮಂಗಳೂರು ಜಿಲ್ಲೆಯಲ್ಲಿದೆ. ಅದು ಕೇವಲ ಹತ್ತು ಕಿ ಮೀ ಅಂತರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66 ರಕ್ಕೆ ಹೊಂದಿಕೊಂಡಿದೆ. ಸೌಂದರ್ಯದ ಸೆರಗನ್ನು ನೆಲದ ಮೇಲೆ ಹಾಸಿದಂತೆ ಕಾಣುತ್ತದೆ.
ಇವುಗಳನ್ನು ನೋಡುವ ಸಲುವಾಗಿಯೇ ಒಮ್ಮೆ ಪ್ರವಾಸವನ್ನು ಏರ್ಪಡಿಸಿಕೊಳ್ಳಿ. ಅದರಲ್ಲೂ ಮಕ್ಕಳಿಗೆ ನೈಸರ್ಗಿಕ ಸೌಂದರ್ಯದ ಸವಿ ಉಣಿಸುವುದನ್ನು ಮರೆಯಲೇ ಬೇಡಿ. ಪ್ರಕೃತಿಯ ಚೆಲುವು ಅಪ್ರತ್ಯಕ್ಷವಾಗಿ ಮನೋ ಸಂಸ್ಕಾರ, ಜೀವನದ ಬಗೆಗಿನ ಪ್ರೀತಿ. ನಿಸರ್ಗದ ಮೇಲಿನ ಭಕ್ತಿ, ಧನ್ಯತಾ ಭಾವಗಳನ್ನು ನೂರ್ಮಡಿಗೊಳಿಸುತ್ತದೆ. ಹಾಗೆಯೇ ಸಂತೋಷದ ಜೊತೆಗೆ ಸಮಯದ ಸದುಪಯೋಗವಾಗುತ್ತದೆ. ಬದುಕಿನ ನಿರಂತರತೆಗೆ ಒಂದು ವಿರಾಮ ಹಾಗೂ ಜ್ಞಾನದ ಕಣಜಕ್ಕೆ ಒಂದು ಕಾಳು ಸೇರಿದಂತಾಗುತ್ತದೆ.
*51ನೇ ವರ್ಷಕ್ಕೆ ಮೂರನೇ ಮಗುವಿನ ತಂದೆಯಾದ ಬಿಜೆಪಿ ಸಂಸದ*
https://pragati.taskdun.com/bjp-mp-manoj-tivari-became-father-of-baby-girl/
*ರಾಜ್ಯಕ್ಕೆ ಎರಡು ಶಾಕಿಂಗ್ ಸುದ್ದಿ…!*
https://pragati.taskdun.com/karnata1st-zika-virus5-yers-girlkarnatakacold-windrainbreathing-problemminister-sudhakarwarning/
*ಸಿಗರೇಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್*
https://pragati.taskdun.com/govt-planning-to-ban-on-loose-cigarate-sales/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ