ಭಾರತವು ಶಕ್ತಿಶಾಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಅಂಬೇಡ್ಕರ ಕಾರಣ : ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ :
ಜಗತ್ತಿನಲ್ಲಿಯೇ ಭಾರತಕ್ಕೆ ದೊಡ್ಡ ಸಂವಿಧಾನ ರಚಿಸಿರುವ ಅಂಬೇಡ್ಕರ್ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಗೆ ಸಮೀಪದ ದುರದುಂಡಿ ಗ್ರಾಮದಲ್ಲಿ ರವಿವಾರ ಸಂಜೆ ಡಾ.ಬಿ.ಆರ್. ಅಂಬೇಡ್ಕರ ಅವರ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಮಾತನಾಡಿದ ಅವರು, ಅಂಬೇಡ್ಕರ ಅವರನ್ನು ದೇವರಂತೆ ಕಂಡು ದಿನನಿತ್ಯ ಪೂಜಿಸುವಂತೆ ಅವರು ಸಮುದಾಯಕ್ಕೆ ಕರೆ ನೀಡಿದರು.
ಭಾರತವು ಶಕ್ತಿಶಾಲಿ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಅಂಬೇಡ್ಕರ ಅವರು ಕಾರಣರು. ಇಡೀ ವಿಶ್ವವೇ ಬೆರಗಾಗುವಂತಹ ಸಂವಿಧಾನವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದರು. ಅವರ ಪರಿಕಲ್ಪನೆಯಿಂದಾಗಿ ನಾವಿಂದು ಅಧಿಕಾರ ಅನುಭವಿಸುತ್ತಿದ್ದೇವೆ. ಶೋಷಿತ ವರ್ಗದವರ ಧ್ವನಿಯಾಗಿದ್ದ ಅಂಬೇಡ್ಕರ ಭಾರತದ ಅಮೂಲ್ಯ ಆಸ್ತಿ ಎಂದು ಬಣ್ಣಿಸಿದರು.
ಅಂಬೇಡ್ಕರ ಹೇಳಿದಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಅವರು ತಿಳಿಸಿದರು.
ದುರದುಂಡಿ ಗ್ರಾಮದ ಅಭಿವೃದ್ಧಿಗೆ ಕಳೆದ ೧೫ ವರ್ಷಗಳಿಂದ ಸರ್ಕಾರದ ವಿವಿಧ ಯೋಜನೆಯಡಿ ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮೊದಲಿನಿಂದಲೂ ದುರದುಂಡಿ ಗ್ರಾಮಸ್ಥರ ಉಪಕಾರ ನಮ್ಮ ಕುಟುಂಬದ ಮೇಲಿದೆ ಎಂದರು.
ಕಬ್ಬಿಗೆ ಬೆಂಬಲ ಬೆಲೆ ನೀಡಿ : ರೈತ ಈ ದೇಶದ ಬೆನ್ನೆಲಬು. ರೈತನು ಸುಖವಾಗಿದ್ದರೆ ಇಡೀ ದೇಶವೇ ಸುಖವಾಗಿರುತ್ತದೆ. ಕಷ್ಟಪಟ್ಟು ಬೆಳೆದ ಕಬ್ಬಿಗೆ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರವನ್ನು ಆಗ್ರಹಿಸಿದರು.
ಉತ್ತಮ ವ್ಯಕ್ತಿಯನ್ನು ಆರಿಸಿ : ಸಣ್ಣಪುಟ್ಟ ಕೆಲಸಕ್ಕೂ ಕೇವಲ ಶಾಸಕರನ್ನು ಅವಲಂಬಿಸಬೇಡಿ. ಎಲ್ಲದಕ್ಕೂ ನನ್ನನ್ನೇ ಕೇಳಬೇಡಿ. ನಿಮ್ಮ ಕೆಲಸಕ್ಕೆಂದೇ ಗ್ರಾಮ ಪಂಚಾಯತಿ ಸಮೀತಿ ಇರುತ್ತದೆ. ಆದ್ದರಿಂದ ಮುಂದೆ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯಾವುದೇ ಆಸೆ, ಆಮೀಷಕ್ಕೆ ಒಳಗಾಗದೇ ನಿಮ್ಮ ಕೆಲಸಕ್ಕೆ ಬರುವ ಉತ್ತಮ ವ್ಯಕ್ತಿಯನ್ನು ಆರಿಸಿ ಕಳುಹಿಸಿ. ಅವರಿಂದ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಿ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದುರದುಂಡಿ ಬಸ್ ನಿಲ್ದಾಣದ ಬದಿ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ ಅವರ ಮೂರ್ತಿ ಪ್ರತಿಷ್ಠಾಪನೆಯನ್ನು ನೆರವೇರಿಸಿದರು.
ಘಯೋಮನೀಬ ಮಹಾಮಂಡಳದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಗ್ರಾಪಂ ಅಧ್ಯಕ್ಷ ಭೀಮಶಿ ಹುಕ್ಕೇರಿ, ಮುಖಂಡರಾದ ಮಹಾದೇವ ತಾಂಬಡಿ, ಹೊನ್ನಜ್ಜ ಕೋಳಿ, ಡಾ.ಎಸ್.ಎಚ್. ಗೋರಖನಾಥ, ನಿಂಗಪ್ಪ ಮಾಳ್ಯಾಗೋಳ, ಭೀಮಶಿ ಅಂತರಗಟ್ಟಿ, ಸಿದ್ದಪ್ಪ ಅಂತರಗಟ್ಟಿ, ಲಕ್ಷ್ಮಣ ನಿಂಗನ್ನವರ, ಸಿದ್ದಯ್ಯಾ ಹಿರೇಮಠ, ರಮೇಶ ಬಂಗಾರಿ, ಪತ್ರಕರ್ತ ಚನ್ನಪ್ಪ ವಗ್ಗನವರ, ವೀರೇಂದ್ರ ಪತ್ತಾರ, ಮೂಡಲಗಿ ತಾಲೂಕಾ ನೌಕರರ ಸಂಘದ ಅಧ್ಯಕ್ಷ ಆನಂದ ಹಣಜ್ಯಾಗೋಳ, ಅವ್ವಣ್ಣಾ ಗೌಡಿ, ಯಲ್ಲಾಲಿಂಗ ಹಾರೂಗೇರಿ, ಪ್ರಶಾಂತ ಸಂಪಗಾಂವಿ, ಮಾರುತಿ ಕಾಶವ್ವಗೋಳ, ರಂಗಪ್ಪ ಕುಸುಬಿ, ಬಾಳಪ್ಪ ವ್ಯಾಪಾರಿ, ಯಮನಪ್ಪ ತಳವಾರ, ಮಾರುತಿ ತಳವಾರ, ಮಹೇಶ ಭಜಂತ್ರಿ, ದಲಿತ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಭೀಮಶಿ ಅಂತರಗಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ