Belagavi NewsBelgaum NewsKannada NewsKarnataka NewsLatest

*ಅಂಬೇಡ್ಕರ್ ಸಾಮಾಜಿಕ ಬದಲಾವಣೆಯ ಮಹಾನ್ ಚಿಂತಕ: ಶಾಸಕ ಆಸೀಫ್ ಸೇಠ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕೊಡುಗೆ ಅಪಾರ ಮತ್ತು ಮಹತ್ವದ್ದು. ಅವರು ಭಾರತ ದೇಶದ ಸಾಮಾಜಿಕ, ರಾಜಕೀಯ ಮತ್ತು ಕಾನೂನು ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆ ತಂದ ಮಹಾನ್ ಚಿಂತಕರು ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ತಿಳಿಸಿದರು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಶನಿವಾರ (ಮಾ.7) ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ನಡೆದ “ಭೀಮಗಾಯನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಕ್ಕೆ ಅವರು ನೀಡಿದಂತಹ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ “ಭೀಮ ಗಾಯನ” ಕಾರ್ಯಕ್ರಮ ಆಯೋಜಿಸಲಾಗಿದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೆಳಗಾವಿ ನಗರಕ್ಕೆ ಭೇಟಿ ನೀಡಿದ್ದಾಗ ಕಂಗ್ರಾಳ ಗಲ್ಲಿಯ ಒಂದು ಮನೆಯಲ್ಲಿ ತಂಗಿದ್ದರು. ಅಂಬೇಡ್ಕರ್ ಭೇಟಿ ನೀಡಿದ ಮನೆಯನ್ನು ಅಭಿವೃದ್ಧಿ ಪಡಿಸಲು ಮತ್ತು ಅಂಬೇಡ್ಕರ್ ಉದ್ಯಾನವನದಲ್ಲಿ ಬಾಬಾಸಾಹೇಬರ ಬೃಹತ್ ಪ್ರತಿಮೆಯನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದರು.

ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬೆಳಗಾವಿ ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿದ್ದು, ಆ ಭೇಟಿಗಳು ದಲಿತ ಸಮುದಾಯದ ಹಕ್ಕುಗಳು, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿ ಕುರಿತು ಮಹತ್ವದ ಪಾತ್ರ ವಹಿಸಿವೆ ಎಂದು ಶಾಸಕ ಸೇಠ್ ತಿಳಿಸಿದರು. 

Home add -Advt

ಪ್ರಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಗುರುನಾಥ ಕಡಬೂರ, ಶಿಕ್ಷಣದಿಂದಲೇ ಸಮಾಜದಲ್ಲಿ ಬದಲಾವಣೆ ಸಾಧ್ಯ. ಸಮಾನತೆಯ ಸ್ವಾತಂತ್ರ್ಯ ಮತ್ತು ಸಮುದಾಯದ ಹಕ್ಕುಗಳಿಗೆ ಅಡಿಪಾಯ ಹಾಕಿ, ಮಾನವೀಯ ಮೌಲ್ಯಗಳ ಆಧಾರಿತ ಜೀವನವನ್ನು ನಡೆಸಲು ಪ್ರೇರಣೆಯಾದವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಎಂದು ಹೇಳಿದರು.

ಸಂವಿಧಾನ ಪೀಠಿಕೆ ವಾಚನ

ಇದಕ್ಕೂ ಮುಂಚೆ ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಅವರು “ಸಂವಿಧಾನ ಪೀಠಿಕೆ” ಬೋಧಿಸಿದರು.

ಸಂವಿಧಾನ ಪೀಠಿಕೆ

ಭಾರತದ ಜನತೆಯಾದ ನಾವು, ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಸಂವಿಧಾನಾತ್ಮಕವಾಗಿ ಸ್ಥಾಪಿಸಿ, ಅದರ ಎಲ್ಲಾ ನಾಗರಿಕರಿಗೆ: ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು;

ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವನ್ನು; 

ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು;  ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಹಾಗೂ ಅಖಂಡತೆಯನ್ನು ಖಾತ್ರಿಪಡಿಸುವ ಭ್ರಾತೃತ್ವವನ್ನು; ಪ್ರವರ್ಧಮಾನಗೊಳಿಸಲು ಶ್ರದ್ಧಾಪೂರ್ವಕವಾಗಿ ಸಂಕಲ್ಪ ಮಾಡಿ, ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಈ 1949ರ ನವೆಂಬರ್ ಮಾಹೆಯ 26ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಅಳವಡಿಸಿಕೊಂಡು, ಜಾರಿಗೊಳಿಸಿ, ನಮಗೆ ನಾವೇ ಸಮರ್ಪಿಸಿಕೊಳ್ಳುತ್ತೇವೆ.

“ಭೀಮಗಾಯನ” ಸಂಗೀತ ಕಾರ್ಯಕ್ರಮ

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆ, ಸಮಾನತೆಯ ಹೋರಾಟ, ಅಸ್ಪೃಶ್ಯತೆ ನಿರ್ಮೂಲನೆ, ಸ್ತ್ರೀ ಸಮಾನತೆ ಕುರಿತ ಮತ್ತು ಸಮಾನತೆಯ ಸ್ವರ ಸಂಭ್ರಮ ಭೀಮನ ಆದರ್ಶಗಳನ್ನು ಸ್ವರಗಳಲ್ಲಿ ಜೀವಂತಗೊಳಿಸುವ ಜಾಗೃತಿ, ಆತ್ಮಗೌರವ ಮತ್ತು ಸಮಾನತೆಯ ಸಂಗೀತ ಭೀಮ ಗಾಯನ ಕಾರ್ಯಕ್ರಮ ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘವು ಭೀಮಗಾಯನವನ್ನು ಪ್ರಸ್ತುತಪಡಿಸಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ರಾಯವ್ವಗೋಳ, ದಲಿತ ಸಂಘಟನೆಗಳ ಮುಖಂಡರಾರ ಮಲ್ಲೇಶ್ ಚೌಗಲಾ, ಕರೆಪ್ಪ ಗುಡ್ಡೆನ್ನವರ, ಸಿದ್ರಾಯಿ ಮೇತ್ರಿ ಸೇರಿದಂತೆ ಸಮಾಜದ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. 

Related Articles

Back to top button