ಪ್ರಗತಿವಾಹಿನಿ ಸುದ್ದಿ: ಕನ್ನಡ ಎಂದರೆ ಕೇವಲ ಭಾಷೆಯಲ್ಲ ಅದೊಂದು ಭಾವ ಸೇತು.ವಿಶ್ವದೆಲ್ಲೆಡೆ ಮನಸ್ಸು, ಸಂಸ್ಕೃತಿಗಳನ್ನು ಬೆಸೆಯುತ್ತಾ ಬೆಳೆಯುತ್ತಿರುವುದು ಹೆಮ್ಮೆಯ ವಿಚಾರ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟರು.
ಅಮೇರಿಕಾದ ವರ್ಜಿನಿಯಾ ರಾಜ್ಯದ ರಿಚ್ಮಂಡ್ ನಲ್ಲಿ ನಡೆಯುತ್ತಿರುವ ಅಕ್ಕಾ (ಅಮೇರಿಕಾ ಕನ್ನಡ ಸಂಘಟನೆಗಳ ಒಕ್ಕೂಟ) ಸಮ್ಮೇಳನದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
ಕರ್ನಾಟಕದಲ್ಲೇ ಕನ್ನಡದ ಕಾರ್ಯಕ್ರಮಗಳ ಸಂಘಟನೆ ಕಷ್ಟಪಡಬೇಕಾದ ಸಂದರ್ಭದಲ್ಲಿ ಅಮೇರಿಕಾದಲ್ಲಿನ ಕನ್ನಡದ ಮನಸುಗಳು 1998 ರಲ್ಲೇ ಒಟ್ಟಾಗಿ ಇಷ್ಟೊಂದು ಸಂಘಟಿತರಾಗಿ, ನಿರಂತರವಾಗಿ ನುಡಿ ಹಬ್ಬ ಆಚರಿಸುತ್ತಾ ಬಂದಿರುವುದು ಅಭಿಮಾನದ ಸಂಗತಿ ಎಂದರು.
ಉದ್ಯೋಗ ಅರಸಿ ಬಂದು ಇಲ್ಲಿಯೂ ತವರಿನ ಭಾಷೆ ,ಸಂಸ್ಕೃತಿಯ ಬಗೆ ಕಾಳಜಿ ಹೊಂದಿರುವುದು ಅಭಿನಂದನೀಯ .
ವಿಶ್ವದೆಲ್ಲೆಡೆ ಇದೇ ರೀತಿ ಕನ್ನಡದ ಕಂಪು ಪಸರಿಸಲಿ ಎಂದು ಸಚಿವ ಎನ್ ಚಲುವರಾಯಸ್ವಾಮಿ ಹಾರೈಸಿದರು.
ಅಮೇರಿಕಾದಲ್ಲಿನ ಕನ್ನಡದ ಮನಸ್ಸುಗಳು ಕರುನಾಡಿನ ಭಾಷೆ ಸಂಸ್ಕೃತಿ ವೃದ್ದಿಗೆ ಕೈ ಜೋಡಿಸಿರುವಂತೆ ನಮ್ಮ ಕೃಷಿ ತಂತ್ರಜ್ಞಾನದ ಅಭಿವೃದ್ಧಿಗೂ ನೆರವಾಗಬೇಕು ಎಂದು ಚಲುವರಾಯಸ್ವಾಮಿ ಮನವಿ ಮಾಡಿದರು
ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಸಾಹಿತ್ಯಿಕವಾಗಿಯೂ ಶ್ರೀಮಂತವಾಗಿದೆ. 8 ಜ್ಞಾನಪೀಠ ಪ್ರಶಸ್ತಿಗಳು ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದರು.
ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ಕನ್ನಡವಾಗಿರು ,ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುತ್ತಾ ಕನ್ನಡದ ದೀಪವನ್ನು ಮನೆ ಮನೆಗಳಲ್ಲಿ ಬೆಳಗೋಣ ಎಂದು ಎನ್. ಚಲುವರಾಯಸ್ವಾಮಿ ಕರೆ ನೀಡಿದರು.
ರಾಜ್ಯ ಸರ್ಕಾರ ಸಂಘಟನೆ ಹಾಗೂ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೃಷಿ ಸಚಿವರು ತಿಳಿಸಿದರು.
ವಿಧಾನ ಪರಿಷತ್
ಸಭಾಪತಿ ಬಸವರಾಜ್ ಹೊರಟ್ಟಿ ಅವರು ಸಹ ಕನ್ನಡದ ಹಿರಿಮೆ ಹಾಗೂ ಅಕ್ಕ ಸಮೇಳನದ ಶ್ರೇಯಸ್ಸಿನ ಬಗ್ಗೆ ವಿವರಿಸಿದರು.
ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಸುತ್ತೂರು ಮಠದ ಶ್ರೀ ದೇಶಿಕೇಂದ್ರ ಸ್ವಾಮಿಗಳು, ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ,ಶಾಸಕರಾದ ಎಸ್.ಟಿ ಸೋಮಶೇಖರ್.
ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ನಾಗರಾಜ್ ಯಾದವ್ ಮಾಜಿ ಸಚಿವರಾದ ಹೆಚ್.ಅಂಜನೇಯ,
ರಾಣಿ ಸತೀಶ್, ವರ್ಜೀನಿಯಾ ಸೆನೆಟರ್ ಕೆನ್ ಅಕ್ಕ ಸಂಸ್ಥೆಯ ಅಧ್ಯಕ್ಷ ರವಿ ಬೋರೇಗೌಡ, ಅಕ್ಕ ಸಂಸ್ಥಾಪಕ ಅಧ್ಯಕ್ಷ ಡಾ.ಅಮರನಾಥ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಮತ್ತಿತರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ