
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಕೇಂದ್ರ ಗೃಹ ಸಚಿವ ಅಮಿತ್ ಶಾ ಏ.25 ರಂದು ವಿಜಯಪುರಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆಯಾಗುತ್ತದೆ ಎಂದು ಹೇಳಿಕೆ ನೀಡಿ ರಾಜ್ಯದ ಜನತೆಯಲ್ಲಿ ದ್ವೇಷ ಭಾವನೆ ಹುಟ್ಟಿಸುತ್ತಿದ್ದಾರೆ” ಎಂದು ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಸುಧಾಮ ದಾಸ್ ಟೀಕಿಸಿದರು.
ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜಕೀಯದಲ್ಲಿ ರಾಜಧರ್ಮ ಪ್ರತಿಪಾಧಿಸುತ್ತಿದ್ದ ಅಟಲ್ ಬಿಹಾರಿ ವಾಜಪೇಯಿಯಂಥವರ ಕಾಲದಲ್ಲಿ ಇದ್ದ ಬಿಜೆಪಿ ಈಗಿಲ್ಲ, ಆಡಳಿತದ ಎಲ್ಲಾ ಹಂತದಲ್ಲೂ ದ್ವೇಷ ಭಾವನೆ ಬಿತ್ತುವ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸೋಲನ್ನು ಗ್ರಹಿಸಿರುವ ಅಮಿತ್ ಶಾ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ” ಎಂದರು.
“ಬಾಗಲಕೋಟೆಯಲ್ಲಿ ನಾಲ್ವರು ಅಭ್ಯರ್ಥಿಗಳನ್ನು ಸೇರಿಸಿಕೊಂಡು, ಕರ್ನಾಟಕವನ್ನು ಮೋದಿಯವರಿಗೆ ಒಪ್ಪಿಸಲು ಮತ ನೀಡಿ ಎಂದು ಹೇಳುತ್ತಿದ್ದಾರೆ, ಪ್ರಚಾರ ಸಮಯದಲ್ಲಿ ಶಿಷ್ಟಾಚಾರ ಗಾಳಿಗೆ ತೂರಲಾಗುತ್ತಿದೆ. ಬೇಜವಾಬ್ದಾರಿ ಹೇಳಿಕೆಗಳು ಮಿತಿ ಮೀರಿವೆ ಎಂದ ಅವರು, ಜಗದೀಶ ಶೆಟ್ಟರ್ ಅವರು ಕೇವಲ ಆತ್ಮಗೌರವದ ವಿಷಯ ಮುಂದಿಟ್ಟುಕೊಂಡು ಬಿಜೆಪಿ ಧಿಕ್ಕರಿಸಿ ಕಾಂಗ್ರೆಸ್ ಸೇರಿದ್ದಾರೆ, ಅವರಿಗೆ ತಮ್ಮ ರಾಜಕೀಯ ಜೀವನ ನಿಷ್ಕಳಂಕ ಎನ್ನುವುದನ್ನು ಸಾಬೀತು ಮಾಡಬೇಕಿದೆ” ಎಂದು ಅವರು ಹೇಳಿದರು.
“ಬಿಜೆಪಿಯವರ ಆದೇಶ ಮೀರಿದವರನ್ನು ಮಟ್ಟ ಹಾಕಲು ಸಿಬಿಐ, ಐಟಿಯನ್ನು ಬಳಸಿಕೊಳ್ಳಲಾಗುತ್ತಿದೆ, ಅಕ್ಟೋಬರ್ 6 ರಂದು ಯಡಿಯೂರಪ್ಪ ಅವರಿಗೆ ಸಂಬಂಧಿಸಿದವರ ಮೇಲೆ 30 ಕಡೆ ದಾಳಿ ನಡೆಸಲಾಗಿದೆ. ಆ ಮೂಲಕ ಯಡಿಯೂರಪ್ಪ ಹಾಗೂ ಅವರ ಮಗನನ್ನು ಹಿಡಿದಿಟ್ಟುಕೊಂಡಿದ್ದಾರೆ, ಆದಾಯ ತೆರಿಗೆ ವಿಷಯದಲ್ಲಿ ಯಡಿಯೂರಪ್ಪನವರ ದೌರ್ಬಲ್ಯವಿದೆ. ಅಮಿತ್ ಶಾ ಒತ್ತಡಕ್ಕೆ ಒಳಗಾಗಿ ಯಡಿಯೂರಪ್ಪ ಶೆಟ್ಟರ್ ವಿರುದ್ಧ ಮಾತನಾಡುತ್ತಿದ್ದಾರೆ” ಎಂದು ಸುಧಾಮ ದಾಸ್ ಹೇಳಿದರು.
“2022-23 ರಲ್ಲಿ ಕರ್ನಾಟಕದಿಂದ ಜಿಎಸ್‌ಟಿ ಪಾವತಿ ಆಗಿದೆ. 3. 72 ಕೋಟಿ ರೂ., ಗುಜರಾತದಿಂದ 1.93 ಸಾವಿರ ಕೋಟಿ, ಉತ್ತರ ಪ್ರದೇಶದಿಂದ 1 .33 ಸಾವಿರ ಕೋಟಿ ರೂ. ಆಗಿದೆ. ಆದರೆ 3 .72 ಸಾವಿರ ಕೋಟಿ ಪಾವತಿ ಮಾಡಿದ ಕರ್ನಾಟಕಕ್ಕೆ 50 ಸಾವಿರ ಕೋಟಿ, ಉತ್ತರ ಪ್ರದೇಶದಲ್ಲಿ ಪಾವತಿ ಕಮ್ಮಿಯಾಗಿದ್ದರೂ ಯೋಜನೆಗಳ ಮೂಲಕ 2.90 ಸಾವಿರ ಕೋಟಿ ನೀಡಲಾಗಿದೆ. ಕರ್ನಾಟಕಕ್ಕೆ ಈ ಡಬಲ್ ಇಂಜಿನ್ ಸರ್ಕಾರ ಮೋಸ ಮಾಡುತ್ತಿದೆ. ಗೃಹ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಸಡಕ್ ಯೋಜನೆಯಲ್ಲಿ 3.700 ಲಕ್ಷ ಮನೆಗಳು, ಸಹಾಯ ಧನ ಸಿಕ್ಕಿದ್ದು 1 ಲಕ್ಷ ಮನೆಗೆ, ಗುಜರಾತ್ ನಲ್ಲಿ 4 ಲಕ್ಷ ಮನೆಗೆ 3.99 ಲಕ್ಷ ಮನೆಗಳಿಗೆ ಸಹಾಯ ಧನ ಸಿಕ್ಕಿದೆ. ಎರಡು ಲಕ್ಷ ಕೋಟಿ ನಮಗೆ ಅನುದಾನ ನೀಡಬೇಕಿತ್ತು, ಆದರೆ ಕೇವಲ 37 ಸಾವಿರ ಕೋಟಿ ಮಾತ್ರ ನೀಡಲಾಗಿದೆ” ಎಂದು ಸುಧಾಮ ದಾಸ್ ಆರೋಪಿಸಿದರು.
“ರಾಜ್ಯ, ಕೇಂದ್ರ ಸರ್ಕಾರಗಳು ಸುಳ್ಳಿನ ಆಧಾರದ ಮೇಲೆ ಅಧಿಕಾರ ನಡೆಸುತ್ತಿವೆ, ಒಳ ಮೀಸಲಾತಿ ಆದೇಶ ಆಗಿದಿದ್ದರೂ ಸಹ ಶಿಪಾರಸ್ಸು ಮಾಡಿರುವ ಬಗ್ಗೆ ಘೋಷಣೆ ಮಾಡಿದ್ದಾರೆ, ಅದು ಜಾರಿ ಆಗಿದೆ ಎನ್ನುವ ರೀತಿಯಲ್ಲಿ ಬಿಂಬನೆ ಮಾಡಲಾಗ್ತಿದೆ, ದೀನ ದಯಾಳ್ ಉಪಾದ್ಯೆಯರ ಹೆಸರನ್ನ ಒಳಮೀಸಲಾತಿಗೆ ಇಡಲಾಗಿದೆ, ಸದಾಶಿವ ಆಯೋಗದ ವರದಿ ಜಾರಿ ಆಗಿಲ್ಲ. ಆಗೋದು ಇಲ್ಲ, 9 ಶೆಡ್ಯೂಲ್ಗೆ ಸೇರದ ಹೊರತು ಇದನ್ನ ಜಾರಿಗೊಳಿಸಲು ಅವಕಾಶ ಇರುವುದಿಲ್ಲ, ಬಿಜೆಪಿಯವರು ಒಳ ಮೀಸಲಾತಿ ಜಾರಿಗೊಳಿಸಿದ್ದೆವೆ ಎಂದು ಹೇಳುತ್ತಿದ್ದಾರೆ, ಇದು ದಲಿತರಿಗೆ ಮಾಡುತ್ತಿರುವ ಮಹಾ ವಂಚನೆ. ಕಾರಣ ಎಲ್ಲರಲ್ಲಿ ಜಾಗೃತಿಗೊಳಿಸಬೇಕಿದೆ” ಎಂದರು.
“ಕರ್ನಾಟಕ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದೆ, ಲಕ್ಷ ಕೋಟಿ ಆಯವ್ಯದಲ್ಲಿ 77 ಸಾವಿರ ಕೋಟಿ ಸಾಲ ಅಂತ ತೋರಿಸಲಾಗಿದೆ, ಅದರಲ್ಲಿ 40 ಪರ್ಸಂಟ್ ಕಮಿಷನ್ ಸಹ ಅದರಲ್ಲಿಯೇ ತೋರಿಸಲಾಗುತ್ತಿದೆ, ರಾಜ್ಯಕ್ಕೆ ಪ್ರವಾಹ ಬಂದಾಗ ಮೋದಿ ಬರ್ಲಿಲ್ಲ, ಭ್ರಷ್ಟಾಚಾರ ನಡೆದು ಪರ್ಸಂಟೇಜ್ ಆರೋಪ ಇದ್ದರೂ ಒಂದು ಬಾರಿಯೂ ಕೇಳಲಿಲ್ಲ. ತೆರಿಗೆ ಹಣದಲ್ಲಿಯೇ ಅವರು ಚುನಾವಣೆ ಮಾಡುತ್ತಿದ್ದಾರೆ. ನಮ್ಮ ಯೋಜನೆಗಳು ಮೋದಿಯವರು 15 ಲಕ್ಷ ಹಣವನ್ನು ಅಕೌಂಟಿಗೆ ಹಾಕ್ತಿವಿ ಅಂತ ಹೇಳಿದ ಹಾಗಲ್ಲ” ಎಂದು ಕುಟುಕಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಬಿ. ಗೋಪಾಲ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಇದ್ದರು.