Film & EntertainmentKannada NewsKarnataka NewsLatest

*ಅಮಿತಾಭ್ ಬಚ್ಚನ್‌ರ ‘ಜಲ್ಸಾ’ ಬಂಗಲೆ ಮಾಲೀಕತ್ವಕ್ಕೆ ಕೌಟುಂಬಿಕ ಕಿರಿಕ್*: *1993ರ ಗಿಫ್ಟ್ ಡೀಡ್‌ಗೆ ಆಕ್ಷೇಪ*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್‌ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪ್ರಸಿದ್ಧ ನಿವಾಸ ಈಗ ಕೌಟುಂಬಿಕ ವಿವಾದದ ಕೇಂದ್ರವಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಈ ಬಂಗಲೆಯ ಮಾಲೀಕತ್ವ ಯಾರದ್ದು ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಸುಮಾರು ಮೂರು ದಶಕಗಳ ಹಿಂದಿನ ಆಸ್ತಿ ವರ್ಗಾವಣೆ ದಾಖಲೆಯೇ ಇದೀಗ ವಿವಾದಕ್ಕೆ ಕಾರಣವಾಗಿದೆ.

ತಮ್ಮ ಒಪ್ಪಿಗೆಯಿಲ್ಲದೆ ಆಸ್ತಿ ವರ್ಗಾವಣೆ ಮಾಡಲಾಗಿದೆ ಎಂದು ಕುಟುಂಬದ ಸದಸ್ಯರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಖಾಸಗಿ ದಾಖಲೆಗಳಲ್ಲಿ ಜಯಾ ಬಚ್ಚನ್ ಅವರ ಹೆಸರು ಇದ್ದರೆ, ಮತ್ತೊಂದು ಕಡೆ ಸರ್ಕಾರಿ ಆಸ್ತಿ ದಾಖಲೆಯಲ್ಲಿ ಬೇರೆಯವರ ಹೆಸರು ಕಾಣಿಸುತ್ತಿದೆ.

ಮುಂಬೈನ ಜುಹು ಪ್ರದೇಶದಲ್ಲಿರುವ ‘ಜಲ್ಸಾ’ ಬಂಗಲೆಯ ಮಾಲೀಕತ್ವದ ಕುರಿತು ಅಮಿತಾಭ್ ಬಚ್ಚನ್ ಅವರ ಕಿರಿಯ ಸಹೋದರ ಅಜಿತಾಬ್ ಬಚ್ಚನ್ ಅವರ ಪತ್ನಿ ರಮೋಲಾ ಬಚ್ಚನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1993ರಲ್ಲಿ ಜಯಾ ಬಚ್ಚನ್ ಅವರ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಲಾಗಿದೆ ಎನ್ನಲಾದ ಉಡುಗೊರೆ ಪತ್ರದ ಸಿಂಧುತ್ವವನ್ನೇ ಅವರು ಪ್ರಶ್ನಿಸಿದ್ದಾರೆ.

‘ಜಲ್ಸಾ’ ಬಂಗಲೆ ಮೂಲತಃ ತಮ್ಮ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂದು ರಮೋಲಾ ದೂರಿನಲ್ಲಿ ತಿಳಿಸಿದ್ದಾರೆ. 1993ರಲ್ಲಿ ಸಿದ್ಧಪಡಿಸಲಾದ ಉಡುಗೊರೆ ಪತ್ರಕ್ಕೆ ಸ್ಟಾಂಪ್ ಡ್ಯೂಟಿ ಪಾವತಿಸಿಲ್ಲ. ಸರಳ ಕಾಗದದಲ್ಲಿ ಸಿದ್ಧಪಡಿಸಲಾಗಿದ್ದು, ಸಾಕ್ಷಿಗಳ ಸಹಿಯೂ ಇಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದಲ್ಲದೆ, ಮಹಾರಾಷ್ಟ್ರ ಸರ್ಕಾರದ ‘ಅಭಯ ಯೋಜನೆ’ ಅಡಿಯಲ್ಲಿ ಈ ದಾಖಲೆಯನ್ನು ನೋಂದಾಯಿಸಿ ಕ್ರಮಬದ್ಧಗೊಳಿಸಿರುವ ಪ್ರಕ್ರಿಯೆಯ ಬಗ್ಗೆಯೂ ರಮೋಲಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಪೋಲ್ ಹೌಸಿಂಗ್ ಸೊಸೈಟಿಯ ದಾಖಲೆಗಳಲ್ಲಿ ‘ಜಲ್ಸಾ’ ಬಂಗಲೆಯ ಮಾಲೀಕರಾಗಿ ಜಯಾ ಬಚ್ಚನ್ ಅವರ ಹೆಸರು ನಮೂದಾಗಿದೆ. ಆದರೆ ಮಹಾರಾಷ್ಟ್ರ ಸರ್ಕಾರದ ಆಸ್ತಿ ಕಾರ್ಡ್‌ನಲ್ಲಿ ಇನ್ನೂ ರಮೋಲಾ ಬಚ್ಚನ್ ಅವರ ಹೆಸರಿದೆ ಎನ್ನಲಾಗಿದೆ. ಸರ್ಕಾರಿ ದಾಖಲೆಯಲ್ಲಿ ರಮೋಲಾ ಅವರ ಹೆಸರನ್ನು ತೆಗೆದು ಜಯಾ ಬಚ್ಚನ್ ಅವರ ಹೆಸರನ್ನು ಸೇರಿಸುವ ಪ್ರಕ್ರಿಯೆ ಆರಂಭವಾದಾಗ ಈ ವಿವಾದ ಮುನ್ನೆಲೆಗೆ ಬಂದಿದೆ.

ಈ ವಿವಾದದ ಕುರಿತು ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅಭಿಷೇಕ್ ಬಚ್ಚನ್ ಅವರ ವಕ್ತಾರರು ಇದು ಕುಟುಂಬದ ಆಂತರಿಕ ವಿಷಯ ಎಂದು ಹೇಳಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಅಮಿತಾಭ್ ಬಚ್ಚನ್ ಪ್ರತಿ ಭಾನುವಾರ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿ ಶುಭಾಶಯ ಕೋರುವ ಸ್ಥಳವಾಗಿಯೂ ‘ಜಲ್ಸಾ’ ಪ್ರಸಿದ್ಧಿ ಪಡೆದಿದೆ. ಇದೀಗ ಈ ಪ್ರಸಿದ್ಧ ನಿವಾಸದ ಮಾಲೀಕತ್ವದ ವಿಚಾರವೇ ಬಚ್ಚನ್ ಕುಟುಂಬದೊಳಗಿನ ವಿವಾದಕ್ಕೆ ಕಾರಣವಾಗಿದೆ.

Related Articles

Back to top button