ಇಡಿಗೆ ಸಮರ್ಪಕ ಉತ್ತರ, ಯಾವುದೇ ಸಮಸ್ಯೆ ಇಲ್ಲ -ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಮಾಜಿ ಸಚಿವ ಡಿ.ಕೆ.ಶಿವಕುಮಾರ ಅವರ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಗುರುವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನೂ ವಿಚಾರಣೆ ನಡೆಸಿತು.
ಬೆಳಗ್ಗೆ 11 ಗಂಟೆಗೆ ಲಕ್ಷ್ಮಿ ಹೆಬ್ಬಾಳಕರ್ ನವದೆಹಲಿಯ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದು, ಇಡಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಿದರು. ಇಂದು ಅಧಿಕಾರಿಗಳು ನ್ಯಾಯಾಲಯ ಕಲಾಪಗಳಲ್ಲಿ ಬ್ಯುಸಿ ಇದ್ದಿದ್ದರಿಂದ, ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದರು.
“ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕವಾಗಿ ಉತ್ತರ ನೀಡಿದ್ದೇನೆ. ಅವರಿಗೆ ಎಲ್ಲವೂ ಕ್ಲಿಯರ್ ಆಗಿದೆ. ಇಂದು ಅಧಿಕಾರಿಗಳು ಕೋರ್ಟ್ ಕಲಾಪದಲ್ಲಿ ಬ್ಯುಸಿ ಇದ್ದುದರಿಂದ ಕೆಲವು ಪ್ರಶ್ನೆಗಳು ಹಾಗಿಯೇ ಉಳಿದುಕೊಂಡಿವೆ. ಶುಕ್ರವಾರ ಮಧ್ಯಾಹ್ನ12 ಗಂಟೆಗೆ ಪುನಃ ಬರಲು ತಿಳಿಸಿದ್ದಾರೆ. ಶುಕ್ರವಾರವೂ ವಿಚಾರಣೆಗೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ” ಎಂದು ಲಕ್ಷ್ಮಿ ಹೆಬ್ಬಾಳಕರ್ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
“ಅಧಿಕಾರಿಗಳು ಕೇಳಿದ ದಾಖಲೆಗಳನ್ನೂ ಒದಗಿಸಿದ್ದೇನೆ. ಕೆಲವು ದಾಖಲೆಗಳು ತಕ್ಷಣಕ್ಕೆ ಲಭ್ಯವಿಲ್ಲದ್ದರಿಂದ 8 ದಿನಗಳ ಸಮಯಾವಕಾಶ ನೀಡಿದ್ದಾರೆ. ಅವುಗಳನ್ನು ಕಳುಹಿಸಿಕೊಡುತ್ತೇನೆ. ಹಾಗಾಗಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ವಿಚಾರಣೆ ನಡೆಯುತ್ತಿರುವುದರಿಂದ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದರು.
“ಕೆಲವು ಮಾಧ್ಯಮಗಳಲ್ಲಿ ವಿಚಾರಣೆ ಸಂಬಂಧ ಕಾಲ್ಪನಿಕ ವರದಿಗಳು ಬರುತ್ತಿವೆ. ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದರಿಂದಾಗಿ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ನೋವಾಗಿದೆ. ಹಾಗಾಗಿ ಕಾಲ್ಪನಿಕ ವರದಿ ಮಾಡುವ ಬದಲು ಎಲ್ಲ ಮಾಧ್ಯಮಗಳೂ ಸತ್ಯಾಂಶಗಳನ್ನು ವರದಿ ಮಾಡಬೇಕೆಂದು ಕಳಕಳಿಯಿಂದ ವಿನಂತಿಸುತ್ತೇನೆ” ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ