ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾರಣಾಂತಿಕ ಕೊರೊನಾ ಸಮಯದಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸೇವೆ ಅನನ್ಯ ಎಂದು ಆಶಾ ಕೋರೆ ಹೇಳಿದ್ದಾರೆ.
ಅವರು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ವಿಶ್ವ ವೈದ್ಯರ ದಿನಾಚರಣೆ ಹಾಗೂ ಕ್ಷೀರ ಭಾಗ್ಯ ಯೋಜನೆ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಚಿಕ್ಕಮಕ್ಕಳ ಒಳವಿಭಾಗದಲ್ಲಿ (ಇನ್ ಪೇಶಂಟ್) ಮಕ್ಕಳಿಗೆ ಉಚಿತವಾಗಿ ಹಾಲು ವಿತರಿಸುವ ವಿನೂತನವಾದ ಕ್ಷೀರಭಾಗ್ಯ ವೆಂಬ ಯೋಜನೆಯನ್ನು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತ ಕ್ಷೀರಭಾಗ್ಯ ಯೋಜನೆಯು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ಕನಸಿನಕೂಸಾಗಿದ್ದು ಇದರಿಂದ ಸಮಾಜದ ಮಧ್ಯಮ ಹಾಗೂ ಕೆಳವರ್ಗದ ಜರ ಮಕ್ಕಳಿಗೆ ಹಾಲಿನ ಪೌಷ್ಟಿಕಾಂಶ ಕೊರತೆಯನ್ನು ನೀಗುವಲ್ಲಿ ಅನುಕೂಲಗುತ್ತದೆ ಹಾಗೂ ಕಳೆದ ಮಾರ್ಚ್ ನಿಂದ ಈ ವರೆವಿಗೂ ಕೊರೊನಾ ವಿಶ್ವದೆಲ್ಲೆಡೆ ಅಟ್ಟಹಾಸವನ್ನು ಮೆರೆಯುತ್ತಿದೆ. ಇಂತಹ ಕ್ಲಿಷ್ಟಕರವಾದ ಸಂದರ್ಭದಲ್ಲೂ ಎದೆಗುಂದದೇ, ಜಾಣ್ಮೆ ಕೌಶಲ್ಯ ಹಾಗೂ ತ್ಯಾಗ ಮನೋಭಾವನೆಯಿಂದ ಕಾರ್ಯನಿರ್ವಹಿಸಿದ ವೈದ್ಯರೆಲ್ಲರಿಗೂ ನಮನವೆಂದು ತಮ್ಮ ಹರ್ಷವ್ಯಕ್ತಪಡಿಸಿದರು.
ಕಾರ್ಯಕ್ರಮದ ಇನ್ನೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಎನ್ ಎಸ್ ಮಹಾಂತಶೆಟ್ಟಿ ಮಾತನಾಡುತ್ತಾ ಆಧುನಿಕತೆಯ ಮೆರಗಿನಲ್ಲಿ ಜೀವನದ ನೈಜ ವಾಸ್ತವತೆಯನ್ನು ಮರೆತಿರುವ ಮಾನವಜನಾಂಗಕ್ಕೆ ಸವಾಲೆಸೆದಿರುವ ಕೊರೊನಾ ಸಂದರ್ಭದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯು ನಿಜಕ್ಕೂ ಪ್ರಶಂಸನೀಯವಾದ ಕಾರ್ಯವನ್ನು ನಡೆಸುತ್ತಿದೆ. ಅದರಲ್ಲೂ ಆರ್ಥಿಕವಾಗಿ ಹಿಂದಿರುವ ಹಿನ್ನೆಲೆಯಿಂದ ಬರುವ ರೋಗಿಗಳಿಗೆ ಈ ಆಸ್ಪತ್ರೆ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಇನ್ನಷ್ಟು ಉತ್ತಮವಾಗಿ ನಡೆಯಲು ಕ್ಷೀರಭಾಗ್ಯ ಯೋಜನೆಯು ಕಲಶಪ್ರಾಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೊಬ್ಬ ಅತಿಥಿಯಾಗಿ ಆಗಮಿಸಿದ್ದ ಯು ಎಸ್ ಎಮ್ ಕೆ ಎಲ್ ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಮಾತನಾಡುತ್ತ ಕಳೆದ ಮಾರ್ಚನಿಂದ ಕೊರೊನಾ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದರೂ ಇಂತಹ ಸಮಯದಲ್ಲಿ ಆರೋಗ್ಯ ಸಿಬ್ಬಂದಿ ತಮ್ಮ ಆರೊಗ್ಯ, ತಮ್ಮ ಕುಟುಂಬದವರ ಆರೋಗ್ಯವನ್ನೂ ಲೆಕ್ಕಿಸದೇ ಉತ್ಸಾಹದಿಂದ ಕೊರೊನಾ ವಾರಿಯರ‍್ಸ ಸೇವೆಯನ್ನು ಸಲ್ಲಿಸಿದ್ದಾರೆ ಹಾಗೂ ಸಲ್ಲಿಸುತ್ತಿದ್ದಾರೆ. ಪ್ರತಿ ದಿನ ಯಾವ ರೋಗಿಯು ಕೊರೊನಾ ಸೋಂಕಿತ ಹಾಗೂ ಸೋಂಕಿತನಲ್ಲ, ಯಾವಾಗ ಯಾವ ರೋಗಿಯನ್ನು ಪರೀಕ್ಷಿಸಲು ಹೋಗಿ ನನಗೇನಾದರೂ ಸೋಂಕು ಬಂದೀತೆ ಎಂಬ ಗೊಂದಲಗಳಿಗೆ ಒಳಗಾಗದೇ ರೋಗಿಗಳನ್ನು ಪರೀಕ್ಷಿಸಿ ಉಪಚರಿಸುತ್ತಿರುವ ವೈದ್ಯರ ಸೇವೆಯು ನಿಜಕ್ಕೂ ಪ್ರಶಂಸನೀಯವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ, ಹಾಲು ನಿಸರ್ಗದತ್ತವಾಗಿ ಸಿಗುವ ಅಧ್ಭುತ ವರದಾನವಾಗಿದೆ. ಅದರಲ್ಲೂ ಮಕ್ಕಳ ಪೋಷಣೆಗೆ ಇದು ಉಡುಗೊರೆಯೇ ಸರಿ, ಪ್ರತಿ ನಿತ್ಯ ಒಳವಿಭಾಗದ ಮಕ್ಕಳಿಗೆ ಉಚಿತವಾಗಿ ಹಾಲನ್ನು ಕೊಡುವ ಆಶಯ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರದ್ದಾಗಿದ್ದು ವೈದ್ಯರ ದಿನಾಚರಣೆಯ ಅಂಗವಾಗಿ ಇದನ್ನು ಪ್ರಾರಂಭಿಸಲು ನಿಜಕ್ಕೂ ಹೆಮ್ಮೆ ಎನ್ನಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಎಮ್ ಎಸ್ ಕಡ್ಡಿ ಕ್ಷೀರಭಾಗ್ಯ ಯೋಜನೆಯ ರೂಪುರೇಷೆಗಳ ಬಗ್ಗೆ ತಿಳುವಳಿಕೆ ನೀಡಿದರು. ಕೆಎಲ್ಇ ಆಸ್ಪತ್ರೆ ಇರುವವರೆಗೂ ಈ ಯೋಜನೆ ಶಾಶ್ವತವಾಗಿ ಮುಂದುವರಿಯಲಿದೆ. ಇಂತಹ ಯೋಜನೆ ಅತ್ಯಂತ ಅಪರೂಪದ್ದಾಗಿದ್ದು, ಕೆಎಲ್ಇ ಸಂಸ್ಥೆಯ ದೊಡ್ಡ ಕೊಡುಗೆಯಾಗಿದೆ ಎಂದು ಡಾ.ಕಡ್ಡಿ ಹೇಳಿದರು.
ವೈದ್ಯರ ದಿನಾಚರಣೆಯ ಅಂಗವಾಗಿ ಕೊರೊನಾ ವಾರಿಯರ‍್ಸಗಳಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿದ ಯುವ ವೈದ್ಯರುಗಳಾದ ಡಾ. ಶ್ರೀಕಾಂತ ಮೇತ್ರಿ ಹಾಗೂ ಶ್ವಾಸಕೋಶ ತಜ್ಞ ಡಾ. ಗುರುರಾಜ ಉಡಚನಕರ ಅವರನ್ನು ಸನ್ಮಾನಿಲಾಯಿತು. ಆರೋಗ್ಯ ಸಹಾಯಕಿ ತರಬೇತಿಯ ೩ನೇ ಬ್ಯಾಚ್‌ನ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿಲಾಯಿತು.
ಕಾರ್ಯಕ್ರಮದಲ್ಲಿ ಕೆ ಎಲ್ ಇ ಹೋಮಿಯೋಪಾಥಿಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಮ್ ಎ ಉಡಚನಕರ, ಕೆ ಎಲ್ ಇ ಇನ್ಟ್ಸಿಟ್ಯುಟ್ ಆಫ್ ನರ್ಸಿಂಗ್ ಸೈನ್ಸನ ಪ್ರಾಶುಪಾಲ ವಿಕ್ರಾಂತ ನೆಸರಿ , ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಸಿ ಎನ್ ತುಗಶೆಟ್ಟಿ, ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ ಕಡಕೋಳ, ಡಾ. ಸತೀಶ ಧಾಮಣಕರ, ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಅಶೋಕ ಪಾಂಗಿ,ಡಾ. ಅನಂತರೆಡ್ಡಿ ರೆಡ್ಡೇರ, ಎಲುಬು ಕೀಲು ವಿಭಾಗ ಮುಖ್ಯಸ್ಥ ಡಾ. ಬಿ ಬಿ ಪುಟ್ಟಿ, ಚಿಕ್ಕಮಕ್ಕಳ ವಿಭಾಗದ ಡಾ. ಸುರೇಶ ಖಾಕಂಡಕಿ, ಡಾ. ಅನಿತಾ ಮೋದಗೆ, ಡಾ. ಸೌಮ್ಯಾ ವೇರ್ಣೇಕರ, ಡಾ. ಬಸವರಾಜ ಕುಡಸೋಮಣ್ಣವರ, ಡಾ ಸಂತೋಷಕುಮಾರ ಕರಮಸಿ ಹಾಗೂ ಅಪಾರ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಅರುಣ ನಾಗಣ್ಣವರ ನಿರೂಪಿಸಿದರು. ಡಾ. ಬಿ ಎಸ್ ಮಹಾಂತಶೆಟ್ಟಿ ಸ್ವಾಗತಿಸಿದರು, ಡಾ. ಸಂತೋಷಕುಮಾರ ಕರಮಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ