ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್ -ನವೆಂಬರ್ 27ರಂದು ಹೈದರಾಬಾದ್ ನಲ್ಲಿ ಪಶು ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ, ಬೆಂಕಿ ಹಚ್ಚಿ ಕೊಂದಿದ್ದ ಎಲ್ಲ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿದೆ.
ಶುಕ್ರವಾರ ಬೆಳಗಿನಜಾವ 3.30ಕ್ಕೆ ಸ್ಥಳ ಮಹಜರು ಮಾಡಲು ಆರೋಪಿಗಳನ್ನು ಕರೆದೊಯ್ದಿದ್ದ ಪೊಲೀಸರು, ಪಶು ವೈದಯೆಯನ್ನು ಕೊಂದ ಸ್ಥಳದಿಂದ 100 ಮೀಟರ್ ಅಂತರದಲ್ಲಿ ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದಾರೆ.
ಅತ್ಯಾಚಾರ ನಡೆದ ನಂತರ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಆರೋಪಿಗಳಿಗ ಉಗ್ರ ಶಿಕ್ಷೆ ನೀಡುವಂತೆ ಒತ್ತಾಯ ಕೇಳಿ ಬಂದಿತ್ತು. ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದ ಜನರು, ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆಯೂ ಆಗ್ರಹಿಸಿದ್ದರು.
ಜನರ ಆಕ್ರೋಶದ ಹಿನ್ನೆಲೆಯಲ್ಲಿ ಸರಿಯಾದ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಗುರುವಾರ ರಾತ್ರಿ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳ ಮಹಜರು ನಡೆಸಲು ಕರೆದೊಯ್ದಿದ್ದರು. ಈ ವೇಳೆ ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಸೈದರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ ನೇತೃತ್ವದ ಪೊಲೀಸರ ತಂಡ ಎಲ್ಲ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಕೊಂದು ಹಾಕಿದೆ. ವಿಶ್ವನಾಥ ಸಜ್ಜನರ್ ಹುಬ್ಬಳ್ಳಿ ಮೂಲದ ಅಧಿಕಾರಿ. ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗಾಗಿ ಎನ್ ಕೌಂಟರ್ ನಡೆಸಬೇಕಾಯಿತು ಎಂದು ಸಜ್ಜನರ್ ತಿಳಿಸಿದ್ದಾರೆ.
ಪೊಲೀಸರ ಕ್ರಮಕ್ಕೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ. ಎಲ್ಲೆಡೆ ಸಂಭ್ರಮಿಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ