Kannada NewsKarnataka News

ಆನಂದ ಮಾಮನಿ ನಿಧನ: ಹುಕ್ಕೇರಿ ಶ್ರೀ, ಡಾ.ಪ್ರಭಾಕರ ಕೋರೆ ತೀವ್ರಶೋಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 

ಸವದತ್ತಿ ಮತಕ್ಷೇತ್ರದ ಶಾಸಕರೂ, ವಿಧಾನಸಭೆಯ ಉಪಸಭಾಧ್ಯಕ್ಷರೂ ಆಗಿದ್ದ ಆನಂದ ಮಾಮನಿ ಅವರು ಲಿಂಗೈಕೆರಾಗಿರುವುದು ನಮಗೆ ಅತೀವ ದುಃಖವನ್ನು ಉಂಟುಮಾಡಿದೆ ಎಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಆನಂದ ಮಾಮನಿ ಅವರು ಎಲ್ಲರೊಂದಿಗೆ ಅವಿನಾಭವದಿಂದ ಇರುತ್ತಿದ್ದರು. ನನಗೆ ಸಚಿವ ಸ್ಥಾನ ಬೇಡ. ನಮ್ಮ ತಂದೆ ಅಲಂಕರಿಸಿದ್ದ ಉಪಸಭಾಧ್ಯಕ್ಷ ಸ್ಥಾನವನ್ನು ಅಲಂಕರಿಸಬೇಕೆoಬ ಬಯಕೆ ಇದೆ ಎಂದು ಹೇಳಿದ್ದರು.
ಕಳೆದ ಎರಡು ವರ್ಷಗಳಲ್ಲಿ ಬೆಳಗಾವಿಯ ಪ್ರಭಾವಿ ನಾಯಕರುಗಳಾದ ಸುರೇಶ ಅಂಗಡಿ, ಉಮೇಶ ಕತ್ತಿ ಹಾಗೂ ಈಗ ಆನಂದ ಮಾಮನಿ ಅವರನ್ನು ಕಳೆದುಕೊಂಡಿರುವುದು ದುಃಖದ ಸಂಗತಿ.
ಆನಂದ ಮಾಮನಿ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಭಗವಂತೆ ಅವರ ಕುಟುಂಬಕ್ಕೆ ದಯಪಾಲಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.
 

ಡಾ.ಪ್ರಭಾಕರ ಕೋರೆ ತೀವ್ರಶೋಕ

 ಸಜ್ಜನ ಯುವ ರಾಜಕಾರಣಿ, ಶಾಸಕ, ಉಪಸಭಾಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ, ಯಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಆನಂದ ಮಾಮನಿ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಕಂಬನಿ ಮಿಡಿದಿದ್ದಾರೆ.
ಡಾ.ಕೋರೆಯವರು ಮಾತನಾಡುತ್ತ, ಆನಂದ ಮಾಮನಿಯವರ ಮನೆತನ ಅಜ್ಜನ ಕಾಲದಿಂದಲೂ ಸವದತ್ತಿ ಕ್ಷೇತ್ರದಲ್ಲಿ ರಾಜಕೀಯವಾಗಿ ಮೇಲ್ಮೆಯನ್ನು ಸಾಧಿಸಿತ್ತು. ಅವರ ತಂದೆಯವರು ಕೂಡ ಉಪಸಭಾಪತಿಗಳಾಗಿ ಉತ್ತಮವಾದ ಕಾರ್ಯನಿರ್ವಹಿಸಿದ್ದರು. ತಂದೆಯವರ ಆದರ್ಶಮೌಲ್ಯಗಳನ್ನು ಅಳವಡಿಸಿಕೊಂಡು ಸವದತ್ತಿ ಕ್ಷೇತ್ರದಿಂದ ದಾಖಲೆಯ ಸತತ ಮೂರು ಬಾರಿ ಆಯ್ಕೆಯಾಗಿ ಅಜಾತಶತ್ರು ಎನಿಸಿಕೊಂಡಿದ್ದರು. ಅವರ ಜನಪರ ನಿಲುವು, ಮುತ್ಸದ್ಧಿ ಗುಣಗಳು, ಕ್ಷೇತ್ರದಲ್ಲಿ ನಿತ್ಯ ಪರ್ಯಟನೆ ಮಾಡುವ ಕ್ರಿಯಾಶೀಲತೆಯಿಂದಲೇ ಜನರಲ್ಲಿ ಹೆಚ್ಚು ಆಪ್ತವಾಗಿದ್ದರು. ಇಂದು ಬೆಳಗಾವಿ ಜಿಲ್ಲೆಯು ಮತ್ತೊಬ್ಬ ಒಬ್ಬ ಕ್ರಿಯಾಶೀಲ ರಾಜಕಾರಣಿಯನ್ನು ಕಳೆದುಕೊಂಡು ಬಡವಾಗಿದೆ. ಕೆಎಲ್‌ಇ ಸಂಸ್ಥೆಯೊಂದಿಗೆ ಹತ್ತಿರದ ಒಡನಾಟವನ್ನು ಇಟ್ಟುಕೊಂಡಿದ್ದ ಆನಂದ ಮಾಮನಿಯವರು ಕೆಎಲ್‌ಇ ಸಂಸ್ಥೆಯ ಅಪ್ಪಟ ಅಭಿಮಾನಿ ಹಾಗೂ ಸವದತ್ತಿಯ ಕೆಎಲ್‌ಇ ಅಂಗಸಂಸ್ಥೆಯಾದ ಎಸ್.ಕೆ.ಪ್ರೌಢಶಾಲೆ ಹಾಗೂ ಎಸ್.ವ್ಹಿ.ಬೆಳ್ಳುಬ್ಬಿ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು. ಈ ಅಂಗಸಂಸ್ಥೆಗಳ ಹಲವಾರು ಸಭೆಸಮಾರಂಭಗಳಿಗೆ ಆಗಮಿಸಿ ಸಾಕ್ಷಿಯಾಗಿದ್ದರು. ಅವರ ಅಗಲಿಕೆ ತೀವ್ರ ಆಘಾತವನ್ನುಂಟುಮಾಡಿದೆ ಎಂದು ಡಾ.ಕೋರೆಯವರು ಕೆಎಲ್‌ಇ ಸಮಸ್ತ ಪರಿವಾರದ ವತಿಯಿಂದ ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಅಗಲಿಕೆಯ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬಕ್ಕೆ ನೀಡಲೆಂದು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button