
ಪ್ರಗತಿವಾಹಿನಿ ಸುದ್ದಿ, ಶಿರಸಿ – ಉತ್ತರ ಕನ್ನಡ ಲೋಕಸಭಾ ಸದಸ್ಯ, ಕೇಂದ್ರದ ಮಾಜಿ ಸಚಿವ ಅನಂತಕುಮಾರ ಹೆಗಡೆ ಕಳೆದ ಹಲವು ವರ್ಷಗಳಿಂದ ತೀವ್ರವಾದ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದು, ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ತೀವ್ರ ಅನಾರೋಗ್ಯದ ಕಾರಣದಿಂದಾಗಿ ಅವರಿಗೆ ಸಾರ್ವಜನಿಕರನ್ನು ಭೇಟಿ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ.
ಅವರ ಮಾಧ್ಯಮ ಪ್ರಕಟಣೆಯ ಪೂರ್ಣ ವಿವರ ಹೀಗಿದೆ:
ಅನಂತಕುಮಾರ ಹೆಗಡೆ ಕಳೆದ ಹಲವು ವರ್ಷಗಳಿಂದ ತೀವ್ರವಾದ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದು, ಇದೇ ಕಾರಣದಿಂದಾಗಿ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ಬಗ್ಗೆ ತಮ್ಮ ನಿರ್ಧಾರ ವ್ಯಕ್ತಪಡಿಸಿದ್ದರು. ಕಳೆದ ಲೋಕಸಭಾ ಚುನಾವಣೆಯ ನಂತರದಿಂದ ಹೆಚ್ಚಿನ ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಂಪರ್ಕದಿಂದ ದೂರವಿರುತ್ತಿದ್ದರು.
ಇತ್ತೀಚೆಗೆ ಕೆಲವು ತಿಂಗಳಿಂದ ಬೆನ್ನು ನೋವು ಮತ್ತು ಕಾಲು ನೋವು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ತಜ್ಞರು ತಕ್ಷಣವೇ ಕಾಲಿನ ಶಸ್ತ್ರ ಚಿಕಿತ್ಸೆಯನ್ನು ನಡೆಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದರು.
ಇದೀಗ ಕೆಲವು ದಿನಗಳ ಹಿಂದೆ ನಡೆಸಿದ ಗಂಭೀರ ಶಸ್ತ್ರ ಚಿಕಿತ್ಸೆಯ ನಂತರ ಸಂಸದರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗೂ ವೈದ್ಯರು ದೀರ್ಘಾವಧಿಯ ವಿಶ್ರಾಂತಿಯನ್ನು ಪಡೆಯುಲು ಸೂಚಿಸಿರುವ ಹಿನ್ನೆಲೆಯಲ್ಲಿ ಪೂರ್ಣವಾಗಿ ಗುಣಮುಖರಾಗುವವರೆಗೆ ಕೆಲ ಕಾಲ ಸಂಸದರು ಸಾರ್ವಜನಿಕ ಕಾರ್ಯಕ್ರಮ ಹಾಗೂ ಭೇಟಿಗೆ ಲಭ್ಯವಿರುವುದಿಲ್ಲ.