ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ವಿಶಾಖಪಟ್ಟಣದಲ್ಲಿ ಕಳೆದ ತಿಂಗಳು ಸಂಭವಿಸಿದ ಭೀಕರ ಅನಿಲ ಸೋರಿಕೆ ದುರಂತ ಮಾಸುವ ಮುನ್ನವೇ ಮತ್ತೊಂದು ಅನಿಲ ಸೋರಿಕೆ ಘಟನೆ ನಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿಶಾಖಪಟ್ಟಣಂನ ವೈಜಾಗ್ನಲ್ಲಿರುವ ಪರವಾಡ ಫಾರ್ಮಾ ಸಿಟಿಯಲ್ಲಿರುವ ಸೈನರ್ ಲೈಫ್ ಸೈನ್ಸ್ನಲ್ಲಿ ಗ್ಯಾಸ್ ಸೋರಿಕೆಯಾಗಿದೆ. ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ವಿಷಾನಿಲ ಸೇವಿಸಿ ನಾಲ್ವರ ಸ್ಥಿತಿ ಗಂಭೀರವಾಗಿದೆ.
ಇತ್ತೀಚೆಗಷ್ಟೇ ವಿಶಾಖಪಟ್ಟಣಂನಲ್ಲಿ ಆರ್.ಆರ್. ವೆಂಕಟಪುರಂನ ಎಲ್.ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲದ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿತ್ತು. ಈ ದುರಂತದಲ್ಲಿ 13ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 1 ಸಾವಿರಕ್ಕೂ ಹೆಚ್ಚು ಜನರು ವಿಷಾನಿಲ ಸೇವನೆಯಿಂದ ಆಸ್ಪತ್ರೆ ಸೇರಿದ್ದರು. ದನ, ಕರು, ಸಾಕುಪ್ರಾಣಿಗಳು ಕೂಡ ನಡುರಸ್ತೆಯಲ್ಲೇ ವಿಷಾನೀಲಕ್ಕೆ ಬಲಿಯಾಗಿದ್ದವು. ಈ ದುರಂತದ ಬೆನ್ನಲ್ಲೇ ಇಂದು ಮತ್ತೊಂದು ಘಟನೆ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ