ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಅಂಗಡಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ಹಣವನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಪಾಲಕರು ಆರೋಪಿಸಿದ್ದಾರೆ.
ಇಲ್ಲದ ನೆಪ ಹೇಳಿ ವಿದ್ಯಾರ್ಥಿಗಳಿಂದ ದಂಡ ವಸೂಲಿ ಮಾಡಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ತೀವ್ರ ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಅವಮಾನಕ್ಕೊಳಗಾಗುತ್ತಿದ್ದಾರೆ ಎನ್ನುವುದು ಪಾಲಕರ ಆರೋಪ.
ಬಸ್ ಕೆಟ್ಟರೂ ವಿದ್ಯಾರ್ಥಿಗಳನ್ನು ಹೊಣೆ ಮಾಡಲಾಗುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಶುಲ್ಕದ ಬರೆಯ ಜೊತೆಗೆ ಅಪಾರ ಪ್ರಮಾಣದಲ್ಲಿ ದಂಡ ತುಂಬುವ ಪರಿಸ್ಥಿತಿ ಬಂದೊದಗಿದೆ. ಕೇಳಲು ಹೋದರೆ ಅಂತಹ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಹಾಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ಬಾಯಿಮುಚ್ಚಿ ದಂಡ ತೆತ್ತಬೇಕಾಗಿದೆ ಎನ್ನುವುದು ಪಾಲಕರ ಆರೋಪ.
ನನ್ನ ಮಗಳು ಅಂಗಡಿ ಎಜುಕೇಶನ್ ಇನಸ್ಟಿಟ್ಯೂಟ್ ನಲ್ಲಿ ಓದುತ್ತಿದ್ದಾಳೆ. ಅವಳು 100 ರೂ. ದಂಡ ಕಟ್ಟಬೇಕೆಂದು ಮನೆಗೆ ಅಳುತ್ತ ಬಂದಿದ್ದಾಳೆ. ತಪ್ಪು ಮಾಡದಿದ್ದರೂ ದಂಡ ಕಟ್ಟುವುದು ಮಕ್ಕಳಿಗೆ ಅವಮಾನ ಮಾಡಿದಂತೆ. ಇಂತಹ ಅವಮಾನ ಸಹಿಸಲು ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳಿಂದ ಸಾಧ್ಯವಾಗುವುದಿಲ್ಲ ಎಂದು ಪಾಲಕರೊಬ್ಬರು ಅಳಲು ತೋಡಿಕೊಂಡರು.
ಯಾರೋ ಒಬ್ಬರು ಬಸ್ ಸೀಟ್ ಹರಿದಿದ್ದಾರೆ ಎಂದು ಸುಮಾರು 2400 ವಿದ್ಯಾರ್ಥಿಗಳಿಂದ ತಲಾ 100 ರೂ.ವಸೂಲಿಗೆ ಆಡಳಿತ ಮಂಡಳಿ ಮುಂದಾಗಿದೆ. ಈ ಹಣಕ್ಕೆ ರಿಸಿಟ್ ಕೂಡ ಕೊಡುವುದಿಲ್ಲ. ಯಾವುದೇ ದಾಖಲೆ ಇರುವುದಿಲ್ಲ. 2400 ವಿದ್ಯಾರ್ಥಿಗಳಿಂದ ತಲಾ 100 ರೂ. ವಸೂಲಿ ಮಾಡಿದರೆ 24 ಸಾವಿರ ರೂ. ಆಗುತ್ತದೆ. ಒಂದು ಸೀಟ್ ಹರಿದರೆ 24 ಸಾವಿರ ರೂ. ಸಂಗ್ರಹಿಸುವುದು ಸುಲಿಗೆಯಲ್ಲದೆ ಇನ್ನೇನು ? ಎನ್ನುವುದು ಪಾಲಕರ ಪ್ರಶ್ನೆ.
ನಾವು ಪಾಲಕರೆಲ್ಲ ಸೇರಿ ದಂಡ ಕಟ್ಟಬಾರದೆಂದು ನಿರ್ಧರಿಸಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡಿ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಇದಕ್ಕೆಲ್ಲ ಕಡಿವಾಣ ಹಾಕಲಿ ಎಂದು ಪಾಲಕರು ಪ್ರಗತಿವಾಹಿನಿ ಬಳಿ ಅಳಲು ತೋಡಿಕೊಂಡಿದ್ದಾರೆ.
ನಾವು ಮಾಧ್ಯಮಗಳ ಮುಂದೆ ಹೋದರೆ ನಮ್ಮ ಮಕ್ಕಳನ್ನೇ ಟಾರ್ಗೆಟ್ ಮಾಡುವ ಅಪಾಯವಿದೆ. ಹಾಗಾದಲ್ಲಿ ಮಕ್ಕಳ ಭವಿಷ್ಯಕ್ಕೆ ಹೊಡೆತವಾಗಲಿದೆ. ಈ ಬಗ್ಗೆ ರಹಸ್ಯವಾಗಿ ವಿಚಾರಣೆ ನಡೆಸಿದರೆ ನಾವು ಎಲ್ಲ ಮಾಹಿತಿ ನೀಡಲು ಸಿದ್ಧರಿದ್ದೇವೆ ಎಂದು ಪಾಲಕರು ಹೇಳುತ್ತಾರೆ.
ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಘೋಷಣೆ ಮೂಲಕ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಡೀ ದೇಶಕ್ಕೆ ಸಾರಿದ್ದಾರೆ. ಆದರೆ ಅವರದೇ ಪಕ್ಷದ ಸಂಸದೆ ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡಲಾಗುತ್ತಿದೆ. ಇದು ಮೋದಿಯವರಿಗೆ ಮಾಡುವ ಅವಮಾನವಲ್ಲವೇ? ನನ್ನ ಮಗಳು ಇಂತಹ ಕಿರುಕುಳ ನೀಡುವ ಕಾಲೇಜಿಗೆ ಹೋಗುವುದಿಲ್ಲ ಎಂದು ಅಳುತ್ತಿದ್ದಾಳೆ ಎಂದು ಪಾಲಕರು ಹೇಳಿದರು.
ದಂಡದ ಪ್ರಮಾಣ ಎಷ್ಟು ಎನ್ನುವುದು ಮುಖ್ಯವಲ್ಲ. ಆದರೆ, ಯಾವುದೇ ತಪ್ಪು ಮಾಡದಿದ್ದರೂ ಅವರಿಂದ ಎಲ್ಲರ ಎದುರು ದಂಡ ವಸೂಲು ಮಾಡುವುದಿದೆಯಲ್ಲ, ಅದರಂತಹ ಹಿಂಸೆ, ಕಿರುಕುಳ ಬೇರೊಂದಿಲ್ಲ. ಸೂಕ್ಷ್ಮ ಮನಸ್ಸಿನ ಹೆಣ್ಣು ಮಕ್ಕಳಂತೂ ಇಂತಹ ಕಿರುಕುಳವನ್ನು ಸಹಿಸುವುದಿಲ್ಲ. ದಯವಿಟ್ಟು ನಮ್ಮ ಮಕ್ಕಳಿಗೆ ಕಿರುಕುಳ ನೀಡುವುದನ್ನು ತಪ್ಪಿಸಿ ಎಂದು ಪಾಲಕರು ಪ್ರಗತಿವಾಹಿನಿ ಬಳಿ ಅಳಲನ್ನು ತೋಡಿಕೊಂಡರು.
ಈ ಕುರಿತು ಆಡಳಿತಾಧಿಕಾರಿಯನ್ನು ವಿಚಾರಿಸಿದರೆ, ಇದು ಆಡಳಿತ ಮಂಡಳಿಯ ನಿರ್ಧಾರ. ನನ್ನ ಕೈಯಲ್ಲಿ ಏನೂ ಇಲ್ಲ ಎನ್ನುತ್ತಾರೆ ಎಂದೂ ಪಾಲಕರು ಹೇಳಿದರು.
ಈ ಕುರಿತು ಪ್ರಗತಿವಾಹಿನಿ ಕಾಲೇಜಿನ ಆಡಳಿತಾಧಿಕಾರಿಯ ಪ್ರತಿಕ್ರಿಯೆ ಕೇಳಿದರೆ, ನಾವು ವಿದ್ಯಾರ್ಥಿಗಳಿಗೆ ವಾರ್ನಿಂಗ್ ನೀಡಿದ್ದೇವೆ. ದಂಡ ವಸೂಲಿ ಮಾಡಿಲ್ಲ. ಆದರೂ ಈ ಕುರಿತು ಸಂಬಂಧಿಸಿದವರನ್ನು ವಿಚಾರಿಸಿ ತಿಳಿಸುತ್ತೇನೆ ಎಂದರು. ನಂತರ ಈ ಬಗ್ಗೆ 2 -3 ಬಾರಿ ಫೋನ್ ಮಾಡಿ, ಪ್ರತಿಕ್ರಿಯೆ ಕೇಳಲು ಪ್ರಯತ್ನಿಸಿದರೂ ಅವರಾಗಲೀ, ಸಂಸದರೂ ಆಗಿರುವ ಮಂಗಲಾ ಅಂಗಡಿಯಾಗಲಿ ಫೋನ್ ರಿಸೀವ್ ಮಾಡಲೇ ಇಲ್ಲ.
ಪ್ರಗತಿವಾಹಿನಿ ಈ ಕುರಿತು ಕಾಲೇಜಿನ ಆಡಳಿತಾಧಿಕಾರಿಯನ್ನು ವಿಚಾರಿಸಿದ ನಂತರ ಆಡಳಿತಾಧಿಕಾರಿ ವಿದ್ಯಾರ್ಥಿಗಳ ಎದುರು ದಂಡ ವಸೂಲಿ ವಿಷಯ ಎತ್ತಲಿಲ್ಲ. ಹಾಗಂತ ದಂಡ ಕೊಡುವುದು ಬೇಡ ಎಂದೂ ಹೇಳಿಲ್ಲ. ದೀಪಾವಳಿ ರಜೆಯ ನಂತರ ಮತ್ತೆ ದಂಡ ಕೇಳುತ್ತಾರೋ ಗೊತ್ತಿಲ್ಲ. ಮಾಧ್ಯಮಗಳಿಗೆ ವಿಷಯ ಮುಟ್ಟಿಸಿದವರ್ಯಾರು ಎಂದು ವಿಚಾರಿಸುತ್ತಿದ್ದಾರೆ ಎಂದು ಪಾಲಕರು ತಿಳಿಸಿದ್ದಾರೆ.
https://pragati.taskdun.com/latest/kittur-utsav-2022-concludes/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ