Kannada NewsKarnataka NewsLatest

ಅಂಗಡಿ, ಶಂಕರಗೌಡ, ಕವಟಗಿಮಠ ಅವರಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಇಂದಿನ ಅಗತ್ಯತೆಯಾಗಿದೆ. ಪಂಚ ಪೀಠಾಧೀಶರು ಹಾಗೂ ವಿರಕ್ತರು ಒಂದಾಗಿ ಸಮಾಜವನ್ನು ಮುನ್ನಡೆಸುವಂತಾಗಬೇಕು ಎಂದು ರಾಜ್ಯಸಭಾ ಸದಸ್ಯ, ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಅಖಿಲ ಭಾರತ ವೀರಶೈವ ಜಿಲ್ಲಾ ಘಟಕ ಆಯೋಜಿಸಿದ್ದ ಉನ್ನತ ಹುದ್ದೆ ಪಡೆದ ಜಿಲ್ಲೆಯ ಗಣ್ಯರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು,  ನಮ್ಮ ಧರ್ಮವು ಮಹಿಳೆಯರಿಂದ ಬೆಳೆದಿದೆ. ಹೀಗಾಗಿ ಮುಂದಿನ ಸಭೆಯಲ್ಲಿ ಹೆಚ್ಚು ಮಹಿಳೆಯರು ಪಾಲ್ಗೊಳ್ಳಬೇಕು ಎಂದರು.

ರಾಜ್ಯದಲ್ಲಿಯೇ ವೀರಶೈವ ಲಿಂಗಾಯತ ಸಮಾಜ ದೊಡ್ಡದಾಗಿದ್ದು ಅದನ್ನು ಸಂಘಟಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ಯುವಕರನ್ನು ನಾವು ಪ್ರೋತ್ಸಾಹಿಸಬೇಕಾಗಿದೆ. ಮುಂದೆ ಸಮಾಜವನ್ನು ಸಂಘಟಿಸುವ ಜವಾಬ್ದಾರಿಯನ್ನು ಅವರಿಗೆ ನೀಡಬೇಕಾಗಿದೆ. ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರದೆ ಸಮಾಜ ವಿಕಾಸವಾಗಲಾರದು ಎಂದು ಅವರು ಹೇಳಿದರು.

ವೀರಶೈವ ಮಹಾಸಭೆಯನ್ನು ಹುಟ್ಟು ಹಾಕಿದ ಹಾನಗಲ್ ಕುಮಾರ ಸ್ವಾಮಿಗಳ ಕೊಡುಗೆ ಚಿರಸ್ಮರಣೀಯವಾದುದು. ಅನೇಕ ದಾನಿಗಳಿಂದ ಈ ಸಮಾಜಕ್ಕೆ ಬಹು ಮೌಲಿಕ ಸೇವೆ ಸಂದಿದೆ. ಅದರಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಕೊಡುಗೆ ಅನುಪಮ. ಲಿಂಗಾಯತ ಬಡವರ ಶಿಕ್ಷಣಕ್ಕಾಗಿ ತಮ್ಮ ಸಮಸ್ತ ಆಸ್ಥಿಯನ್ನು ದಾನ ನೀಡಿದರು. ಆದರೆ ಅದು ಇಂದಿಗೂ ಸರಿಯಾಗಿ ಬಡ ಮಕ್ಕಳನ್ನು ತಲುಪುತ್ತಿಲ್ಲ ಎಂದು ಕೋರೆ ವಿಷಾದಿಸಿದರು.

ಬೆಳಗಾವಿಯಲ್ಲಿ ವೀರಶೈವ ಲಿಂಗಾಯತ ಸಮಾಜದ ಕಲ್ಯಾಣ ಮಂಟಪ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ರೈಲ್ವೆ ಸಚಿವ ಸುರೇಶ ಅಂಗಡಿ ಹೆಚ್ಚಿನ ಆಸಕ್ತಿ ವಹಿಸಬೇಕು. ಅದರಂತೆ ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿನಿಯರಿಗೆ ವಸತಿ ನಿಲಯ ನಿರ್ಮಿಸಿಕೊಡಬೇಕಾಗಿದ್ದು ಮಹಾಸಭೆಯ ಮುಖ್ಯ ಕಾರ್ಯವಾಗಿದೆ ಎಂದು ಕೋರೆ ತಿಳಿಸಿದರು.

ಸುರೇಶ ಅಂಗಡಿ ಈಗ ರೈಲ್ವೇ ಸಚಿವರಾಗಿದ್ದಾರೆ. ಮುಂದೆ ನಮ್ಮ ದೇಶದ ಪ್ರಧಾನ ಮಂತ್ರಿ ಆಗಬೇಕು ಎಂದು  ಪ್ರಭಾಕರ ಕೋರೆ ಹೇಳಿದರು.

ಯುವಕರಿಗೆ ಆಸ್ಪದ ಕೊಡಬೇಕು

ಸನ್ಮಾನ ಸ್ವೀಕರಿಸಿ ಮಾತನಾಡಿದ ರೈಲ್ವೆ ಸಚಿವ ಸುರೇಶ ಅಂಗಡಿ, ಜಗತ್ತಿಗೆ ಸಮಾನತೆಯ ತತ್ವವನ್ನು ನೀಡಿದವರು ಲಿಂಗಾಯತರು. ಬಸವಣ್ಣನವರ ಸಮಾಜೋದ್ಧಾರಕ ಕ್ರಾಂತಿ ಫಲವಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆ ಮೂಡಿತು. ಬಸವಣ್ಣನವರ ಸಂದೇಶ ಕೇವಲ ಒಂದು ಸಮಾಜಕ್ಕೆ ಸೀಮಿತಗೊಂಡಿಲ್ಲ. ಅದು ಎಲ್ಲ ಸಮಾಜದವರಿಗೆ ಅನ್ವಯಿಸುತ್ತದೆ.  ಆದರೆ ನಾವು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಿಲ್ಲ. ಯುವಜನರು ಇಂದು ಸಮಾಜದ ಮುನ್ನಡೆಗೆ ನೂತನ ಭಾಷ್ಯ ಬರೆಯುವುದರಲ್ಲಿ ಸಂದೇಹವಿಲ್ಲ. ಅವರಿಗೆ ನಾವು ಆಸ್ಪದ ಮಾಡಿಕೊಡಬೇಕಾಗಿದೆ ಎಂದರು.

23 ಭಾಷೆಯಲ್ಲಿ ಬಸವಣ್ಣನವರ ವಚನಗಳನ್ನು ಬಿಡುಗಡೆ ಮಾಡಿ ಪ್ರಧಾನಿ ಮೋದಿ ಅವರು ಇಡೀ ಜಗತ್ತಿಗೆ ಬಸವಣ್ಣನವರನ್ನು ಪರಿಚಯ ಮಾಡಿ ಕೊಟ್ಟಿದ್ದಾರೆ ಎಂದು ಅಂಗಡಿ ಹೇಳಿದರು.

ಸಂಘಟನೆ ಇಲ್ಲದೆ ಸಾಧನೆ ಅಸಾಧ್ಯ

 ವಿಧಾನಪರಿಷತ್ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಅಖಿಲ ಭಾರತ ವೀರಶೈವ ಮಹಾಸಭೆಯು 1904ರಲ್ಲಿ ಸ್ಥಾಪನೆಗೊಳ್ಳುವ ಮೂಲಕ ಸಮಾಜ ಹಾಗೂ ಧರ್ಮಕ್ಕೆ ಹೊಸವ್ಯಾಖ್ಯಾನವನ್ನು ನೀಡಿತು. ಸುಶಿಕ್ಷಿತ ಸಮಾಜಕ್ಕೆ ಕರೆ ನೀಡಿತು. ನಮ್ಮಲ್ಲಿ ಅನೇಕ ಬುದ್ದಿವಂತರು, ಪ್ರಜ್ಞಾವಂತರಿದ್ದಾರೆ. ಆದರೆ ಅವರನ್ನು ವೀರಶೈವ ಲಿಗಾಯತ ಸಮಾಜದ ಮುಖ್ಯವಾಹಿನಿಗೆ ಕರೆದುಕೊಂಡು ಹೋಗುವಲ್ಲಿ ಎಡವಿದ್ದೇವೆ. ನಮ್ಮಲ್ಲಿ ಸಂಘಟನೆ ಇಲ್ಲದೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಠ ಮಾನ್ಯಗಳು ಧರ್ಮ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಪ್ರಯತ್ನಿಸಬೇಕು ಎಂದು ಹೇಳಿದರು.

ಎಲ್ಲರನ್ನೂ ಬೆಳೆಸುವ ಪ್ರವೃತ್ತಿ ಬೇಕು

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ಮಾತನಾಡಿ, ನಮ್ಮ ಧರ್ಮದಲ್ಲಿ ವಿಶಾಲವಾದ ಭಾವನೆ ಇದೆ. ಅದು ನಮ್ಮ ರಕ್ತದಲ್ಲಿಯೂ ಬೆರೆತುಹೋಗಿದೆ. ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸದೆ ಮುನ್ನಡೆಸುವುದು ಮುಖ್ಯ ಎಂದರು.

ನನಗೆ ಅಧಿಕಾರ ಸಿಕ್ಕಾಗಲೆಲ್ಲ, ಅಷ್ಟೇ ಅಲ್ಲ ಅಧಿಕಾರ ಇಲ್ಲದಾಗಲೂ ಎಲ್ಲರನ್ನೂ ಬೆಳೆಸಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ. ಅನೇಕ ರೀತಿಯಲ್ಲಿ ಸಂಘರ್ಷ ಮಾಡಿದ್ದೇನೆ.  ಅನೇಕ ಬಾರಿ ಸೋಲು ಕಂಡಿದ್ದೇನೆ. ಆದರೆ ಆ ಸೋಲಿನಲ್ಲೂ ನಾನು ಗೆಲುವು ಕಂಡಿದ್ದೇನೆ. ನಮ್ಮ ಸಮಾಜದಲ್ಲಿರುವ ಒಡಕು ಹೋಗಬೇಕು. ಕಾಲು ಜಗ್ಗುವ ಪ್ರವೃತ್ತಿ ನಿಲ್ಲಬೇಕು. ಎಲ್ಲರನ್ನೂ ನಮ್ಮವರನ್ನಾಗಿ ನೋಡಬೇಕು ಎಂದು ಶಂಕರಗೌಡ ಪಾಟೀಲ ಹೇಳಿದರು.

ಬಸವಣ್ಣನವರು 12ನೇ ಸತಮಾನದಲ್ಲಿ ಎಲ್ಲರೂ ನಮ್ಮವರು ಎಂದು ಕರೆ ನೀಡಿದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ನಾವು ಇನ್ನೂ ಶಿಕ್ಷಣದಲ್ಲಿ ಹಿಂದೆ ಉಳಿದಿದ್ದೇವೆ ಎಂದು ವಿಷಾದಿಸಿದರು.

ಸಾನಿಧ್ಯ ವಹಿಸಿದ್ದ ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು, ಬಸವಣ್ಣನವರು ನೀಡಿದ್ದ ವಿಶ್ವ ಸಂದೇಶವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಸಮಾಜ ಸೇವೆಯನ್ನು ದೇವರ ಸೇವೆಯೆಂದು ತಿಳಿದುಕೊಳ್ಳಬೇಕು. ಹಾನಗಲ್ ಕುಮಾರ ಸ್ವಾಮಿಗಳು ನಿರಂತರ ಸೇವೆಯಲ್ಲಿ ತಲ್ಲೀನರಾಗಿರುತ್ತಿದ್ದರು ಎಂದರು.

ಮಹಾಸಭೆಯ ಅಧ್ಯಕ್ಷೆ ರತ್ನಪ್ರಭಾ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಕಳ್ಳಿಮಠ ವಚನ ಪ್ರಾರಥನೆ ಹಾಡಿದರು. ಎಂ.ಬಿ.ಜಿರಲಿ ಸ್ವಾಗತಿಸಿದರು. ಗುರುದೇವಿ ಹುಲೆಪ್ಪನವರಮಠ, ಆಶಾ ಯಮಕನಮರಡಿ ನಿರೂಪಿಸಿದರು. ಎ.ಬಿ.ಕೊರಬು ವಂದಿಸಿದರು.

ರಾಜ್ಯಘಟಕದ ಅಧ್ಯಕ್ಷ ಎನ್.ತಿಪ್ಪಣ್ಣ, ಕೇಂದ್ರ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರೇಣುಕಾ ಪ್ರಸನ್ನ, ಮಾಜಿ ಉಪಮೇಯರ್ ಜ್ಯಾತಿ ಬಾವಿಕಟ್ಟಿ ಉಪಸ್ಥಿತರಿದ್ದರು.

ಮಧ್ಯಾಹ್ನ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button