ಪಶು ಸಂಗೋಪನಾ ಇಲಾಖೆ: ಬೆಳಗಾವಿ ವಿಭಾಗದ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ
ಜಾನುವಾರುಗಳಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು: ಸಚಿವ ಕೆ.ವೆಂಕಟೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪಶು ಸಂಗೋಪನಾ ಇಲಾಖೆಯಿಂದ ಜಾನುವಾರುಗಳಿಗೆ ಔಷಧಿ ಲಭ್ಯತೆ, ವೈದ್ಯಕೀಯ ಸೌಲಭ್ಯ, ಸಂಚಾರಿ ಪಶು ಚಿಕಿತ್ಸಾ ವಾಹನಗಳ ನಿರ್ವಹಣೆ, ಲಸಿಕೆ, ಮೇವು ಸಂಗ್ರಹಣೆ ಸೇರಿದಂತೆ ರೋಗ ನಿಯಂತ್ರಣ ಕ್ರಮಗಳು ಸರಿಯಾದ ರೀತಿಯಲ್ಲಿ ಆಗಬೇಕು. ಇಲಾಖೆ ಮೂಲಕ ಜಾರಿಗೆ ತಂದಿರುವ ಸರ್ಕಾರದ ಜನಪರ ಯೋಜನೆಗಳ ಸಂಪೂರ್ಣ ಮಾಹಿತಿ ಅಧಿಕಾರಿಗಳಿಗೆ ಇರಬೇಕು ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ ಅವರು ತಿಳಿಸಿದರು.
ನಗರದ ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದ ರೈತ ತರಬೇತಿ ಭವನದಲ್ಲಿ ಸೋಮವಾರ (ನ.06) ನಡೆದ ಪಶು ಸಂಗೋಪನಾ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಧಿಕಾರಿಗಳು ಕಾರ್ಯಕ್ರಮಗಳ ಮಾಹಿತಿಯೇ ಇಲ್ಲದೆ ಜನರಿಗೆ ಯೋಜನೆಗಳನ್ನು ತಲುಪಿಸಲು ಹೇಗೆ ಸಾಧ್ಯ. ಪ್ರತಿ ತಿಂಗಳು ತಾಲೂಕು ಕೇಂದ್ರಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿ, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಬೇಕು. ಇಲಾಖೆಗೆ ಸಂಭಂದಿಸಿದ ಪ್ರತಿಯೊಂದು ಯೋಜನೆಗಳು ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ಇಲಾಖೆಯ ಉಪ ನಿರ್ದೇಶಕರುಗಳಿಗೆ ಸೂಚನೆ ನೀಡಿದರು.
ಜಾನುವಾರುಗಳ ಚಿಕಿತ್ಸೆಗೆ ಪ್ರಥಮ ಆದ್ಯತೆ:
ಉತ್ತರ ಕನ್ನಡ, ಉಡುಪಿ, ಗದಗ ಜಿಲ್ಲೆಗಳಲ್ಲಿ ಪಶು ವೈದ್ಯರ ಕೊರತೆ ಇದ್ದರೆ, ಹೊರ ಗುತ್ತಿಗೆ ಆಧಾರದಲ್ಲಿ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅದರಂತೆ ಈಗ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಜಾನುವಾರುಗಳಿಗೆ ಉತ್ತಮ ಚಿಕಿತ್ಸೆಗಳನ್ನು ನೀಡುತ್ತಿರುವ ಕುರಿತು ಕಡ್ಡಾಯವಾಗಿ ಆಸ್ಪತ್ರೆಗಳಿಗೆ ಭಟಿ ನೀಡಿ ಪರಿಶೀಲಿಸಬೇಕು ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಜಾನುವಾರುಗಳ ಚರ್ಮಗಂಟು ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಾಲು ಬಾಯಿ ಜ್ವರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 12 ಲಕ್ಷ 25 ಸಾವಿರ ಜಾನುವಾರುಗಳಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ಇನ್ನೂ ಸಮೀಕ್ಷೆ ನಡೆಸಿ ಬಾಕಿ ಜಾನುವಾರುಗಳಿಗೆ ಲಸಿಕೆ ನೀಡಲಾಗುವದು ಎಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ್ ಅವರು ತಿಳಿಸಿದರು.
ಕಳೆದ 6 ತಿಂಗಳಲ್ಲಿ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಚರ್ಮಗಂಟು ರೋಗ ಹೆಚ್ಚಾಗಿ ಕಂಡುಬಂದಿತ್ತು ಆದರೆ ಜಾತ್ರೆ, ಸಂತೆಗಳನ್ನು ನಿಷೇಧಿಸುವ ಮೂಲಕ ಚರ್ಮಗಂಟು ರೋಗವನ್ನು ನಿಯಂತ್ರಣಕ್ಕೆ ತರಲಾಗಿದೆ.
ಜಿಲ್ಲೆಯಲ್ಲಿ ನಿರಂತರ ಬೆಳೆಗಳ ಪರಿಸ್ಥಿತಿ ಪರಿಶೀಲನೆ ನಡೆಸಲಾಗಿದೆ. ಸದ್ಯದ ಮಟ್ಟಿಗೆ ಜಾನುವಾರುಗಳ ಮೇವಿಗೆ ಯಾವುದೇ ತೊಂದರೆಯಿಲ್ಲ.
ಕುರಿ-ಮೇಕೆ ಘಟಕ ಮಂಜೂರು:
ಜಿಲ್ಲೆಯ 15 ತಾಲೂಕುಗಳಲ್ಲಿ ಪ್ರಸಕ್ತ ಸಾಲಿನ ಕುರಿ-ಮೇಕೆ ಘಟಕ ಸ್ಥಾನೆಗೆ ಅರ್ಜಿ ಆಹ್ವಾನಿಸಲಾಗಿದ್ದು, 109 ಘಟಕಗಳು ಮಂಜೂರಾಗಿವೆ. ಅದೇ ರೀತಿಯಲ್ಲಿ ಸ್ಪೆಶಾಲಿಟಿ ಪಶು ಆಸ್ಪತ್ರೆ, ಪಾಲಿಕ್ಲಿನಿಕ್, ಪಶು ಚಿಕಿತ್ಸಾಲಯ, ಸಂಚಾರಿ ಪಶು ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಪಶು ಚಿಕಿತ್ಸಾಲಯ ಸೇರಿದಂತೆ ಒಟ್ಟು 276 ಪಶು ವೈದ್ಯಕೀಯ ಸಂಸ್ಥೆಗಳಿವೆ. 17 ಸಂಚಾರಿ ಪಶು ಚಿಕಿತ್ಸಾ ಘಟಕ ವಾಹನಗಳು ಸಂಚರಿಸುತ್ತಿವೆ ಎಂದು ವಿವರಿಸಿದರು.
ಜಾನುವಾರುಗಳ ಮರಣ; ಸದ್ಯದಲ್ಲೇ ಪರಿಹಾರ ಧನ:
ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯಲ್ಲಿ 170 ಆಕಸ್ಮಿಕ ರಾಸುಗಳು ಮರಣ ಹೊಂದಿದ್ದು, ಪರಿಹಾರಕ್ಕಾಗಿ ಅನುದಾನ ಕೂಡ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ಧನ ನೀಡಲಾಗುವುದು.
ಬೆಳಗಾವಿ ವಿಭಾಗದ ಯಾವುದೇ ಜಿಲ್ಲೆಯಲ್ಲಿ ಚಪ್ಪೆಬೇನೆ ಮತ್ತು ಪಿ.ಪಿ.ಆರ್ ರೋಗಗಳು ಕಂಡು ಬಂದಿಲ್ಲ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರಾಜೀವ್ ಕೂಲೇರ್ ಅವರು ಮಾಹಿತಿ ನೀಡಿದರು.
ಲಸಿಕಾ ಕಾರ್ಯಕ್ರಮ ಯಶಸ್ವಿ:
ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 4.57 ಜಾನುವಾರುಗಳಿವೆ ಅದರಲ್ಲಿ 4 ಲಕ್ಷ 19 ಸಾವಿರ ಜಾನುವಾರುಗಳಿಗೆ ಈಗಾಗಲೇ ಲಸಿಕೆಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಇರುವ ಪ್ರದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಪೂರ್ಣಗೊಳಿಸಲಾಗುವುದು. ಜಿಲ್ಲೆಯಲ್ಲಿ ಕಬ್ಬು, ಜೋಳ, ಸಜ್ಜೆ, ಶೇಂಗಾ ಬೆಳೆಗಳು ಹೆಚ್ಚಿವೆ. ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಸಹ ಕಾರ್ಯ ನಿರ್ವಹಿಸುತ್ತಿವೆ ಎಂದು ಬಾಗಲಕೋಟೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಶಿವಾನಂದ ಕರಡಿಗುಡ್ಡ ಅವರು ತಿಳಿಸಿದರು.
ಮೇವು ಖರೀದಿ-ಮೇವು ಸಂಗ್ರಹ:
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಸೇರಿದಂತೆ ವಿವಿಧ ಭಾಗಗಳಲ್ಲಿ ಕಡಿಮೆ ಮಳೆಯಾಗಿರುವ ಕಾರಣ ಸರ್ಕಾರದಿಂದ ಬರ ಪ್ರದೇಶ ಎಂದು ಘೋಷಿಸಲಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಖರೀದಿಗೆ ಜಿಲ್ಲಾಡಳಿತಕ್ಕೆ ಈಗಾಗಲೇ ವರದಿ ಸಲ್ಲಿಸಲಾಗಿದೆ. ಮೇವು ಖರೀದಿಸಿದ ಬಳಿಕ ಸಂಗ್ರಹ ಕೇಂದ್ರಗಳಲ್ಲಿ ಮೇವು ಸಂಗ್ರಹಿಸಲಾಗುವುದು, ಬಳಿಕ ರೈತರಿಗೆ ಕಡಿಮೆ ದರದಲ್ಲಿ ಮೇವು ಮಾರಾಟ ಮಾಡಲಾಗುವುದು ಎಂದು ಧಾರವಾಡ ಉಪ ನಿರ್ದೇಶಕ ರವಿ ಸಾಲಿಗೌಡ ಅವರು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಂದ ಕುರಿ ಮೇಕೆ ಘಟಕ ಸ್ಥಾಪನೆಗೆ ಈಗಾಗಲೇ ಅರ್ಜಿಗಳನ್ನು ಕರೆದು ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಲಸಿಕಾ ಕಾರ್ಯಕ್ರಮ ಹೆಚ್ಚಿಸಿ:
ಇತ್ತೀಚಿಗೆ ಬಾಗಲಕೋಟೆ ಸೇರಿದಂತೆ ಗದಗ, ಹಾವೇರಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ಜಾನುವಾರುಗಳ ಲಸಿಕಾ ಕಾರ್ಯಕ್ರಮಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಕಡಿಮೆ ಪ್ರಮಾಣ ಕಂಡು ಬರುತ್ತಿವೆ. ಮುಂಬರುವ ದಿನಗಳಲ್ಲಿ ಜಾನುವಾರುಗಳು ರೋಗಕ್ಕೆ ತುತ್ತಾಗದಂತೆ ತಡೆಯಲು ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ನೀಡಬೇಕು ಎಂದು ಪಶು ಸಂಗೋಪನಾ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಹೀಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯುತ ಕಾರ್ಯ ನಿರ್ವಹಿಸಬೇಕು. ಬರುವ ದಿನಗಳಲ್ಲಿ ಬೇಸಿಗೆ ಕಾಲ ಎದುರಾಗುವುದರಿಂದ ನಿಮ್ಮ ಜಿಲ್ಲಾಧಿಕಾರಿಗಳ ಜೊತೆಗೆ ಮೇವು ಕೊರತೆಯಿರುವ ಸ್ಥಳಗಳಿಗೆ ಭೇಟಿ ನೀಡಿ ಮೇವು ಪೂರೈಕೆಗೆ ಕುರಿತು ನಿರಂತರ ಪರಿಶೀಲನೆ ನಡೆಸಬೇಕು. ಜೊತೆಗೆ ಇಲಾಖೆಯ ಮೇಲಾಧಿಕಾರಿಗಳಿಗೆ ಕಾರ್ಯದರ್ಶಿಗಳಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ. ವೆಂಕಟೇಶ ಅವರು ತಿಳಿಸಿದರು.
ಬೀಜಗಳ ಕಿರು ಪೊಟ್ಟಣ ವಿತರಣೆ:
ಸಚಿವ ಕೆ. ವೆಂಕಟೇಶ ಅವರು ಮೇವು ಬೆಳೆಯಲು ಬೀಜಗಳ ಕಿರು ಪೊಟ್ಟಣಗಳನ್ನು ರೈತರಿಗೆ ವಿತರಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹರ್ಷಲ್ ಭೋಯರ್, ಪಶು ಸಂಗೋಪನಾ ಇಲಾಖೆಯ ನಿರ್ದೇಶಕ ಮಂಜುನಾಥ ಪಾಳೇಗಾರ, ಜಿಲ್ಲಾ ವಿಭಾಗದ ಜಂಟಿ ನಿರ್ದೇಶಕ ಪರಮೇಶ್ವರ ನಾಯಕ್, ಬೆಳಗಾವಿ ವಿಭಾಗದ ಉಪ ನಿರ್ದೇಶಕರು, ಸಹಾಯ ನಿರ್ದೇಶಕರು, ಮುಖ್ಯ ವೈದ್ಯಾಧಿಕಾರಿಗಳು ಸೇರಿದಂತೆ ಇಲಾಖೆಯ ವಿವಿಧ ಅಧಿಕಾರಿ, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ