ಪ್ರಗತಿವಾಹಿನಿ ಸುದ್ದಿ; ಧಾರವಾಡ: ಅಂಜನಾದ್ರಿ ಬೆಟ್ಟದ ಮೇಲೆ ಗಾಳಿ ಗೋಪುರ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹುಬ್ಬಳ್ಳಿಯ ಗೋಕುಲದಲ್ಲಿ ಜೀರ್ಣೋದ್ಧಾರ ವಾಗಿರುವ ದಾರಾವತಿ ಹನುಮಂತ ದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮಂತ ದೇವರ ಆಶೀರ್ವಾದ ಪಡೆದ ನಂತರ ಏರ್ಪಡಿಸಲಾಗಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹನುಮಂತ ಹುಟ್ಟಿದ್ದು ಕರ್ನಾಟಕದಲ್ಲಿ. ಆತ ಕನ್ನಡ ನಾಡಿನ ವರ ಪುತ್ರ. ಹೊಸಪೇಟೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿ ಗೆ ಈ ಸಾಲಿನ ಬಜೆಟ್ ನಲ್ಲಿ 100 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ. ಬೆಟ್ಟಕ್ಕೆ ರೋಪ್ ವೇ ಇಂದ ಹಿಡಿದು, ಕ್ಷೇತ್ರಕ್ಕೆ ಭೇಟಿ ನೀಡುವ ಜನರ ಅನುಕೂಲಕ್ಕಾಗಿ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ ಎಂದರು.
ದೇವಸ್ಥಾನಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಪೂರೈಸುವ ಭರವಸೆ:
ಅಯೋಧ್ಯೆಯಲ್ಲಿ ಶ್ರೀ ರಾಮನ ದೇವಾಲಯ ನಿರ್ಮಿಸಲಾಗುತ್ತಿದ್ದರೆ, ಇಲ್ಲಿ ಆಂಜನೇಯನ ದೇವಸ್ಥಾನದ ಅಭಿವೃದ್ಧಿಯಾಗುತ್ತಿದೆ ಎಂದರು. ಈ ರಾಜ್ಯದ ಸೇವೆ ಮಾಡುವ ದೊಡ್ಡ ಅವಕಾಶ ಲಭಿಸುವಲ್ಲಿ ಹುಬ್ಬಳ್ಳಿ ಜನರ ಹಾಗೂ ಶಿಗ್ಗಾವಿ ಕ್ಷೇತ್ರದ ಜನರ ಆಶೀರ್ವಾದ ಇದೆ ಎಂದರು. ಜನರು ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬರದ ರೀತಿಯಲ್ಲಿ ನಡೆದುಕೊಳ್ಳುವುದಾಗಿ ತಿಳಿಸಿ ಕನ್ನಡ ನಾಡಿನ ಸೇವೆಯನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿದರು. ದೇವಸ್ಥಾನದ ಹಾಗೂ ಸುತ್ತಲಿನ ಬಡಾವಣೆಗೆ ಸಂಬಂಧಿಸಿದಂತೆ ಮಾಡಿರುವ ಬೇಡಿಕೆಯನ್ನು ಪರಿಗಣಿಸಿ, ಅಗತ್ಯವಿರುವ ಕಾನೂನಿನ ಬದಲಾವಣೆ ತಂದು ಅನುಕೂಲ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಮಕ್ಕಳಿಗೆ ವಿದ್ಯೆ ನೀಡಲು ಕಿವಿಮಾತು :
ಗೋಕುಲದಲ್ಲಿ ಈ ಪುಣ್ಯದ ಕೆಲಸ ಮಾಡಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದ ಮುಖ್ಯ ಮಂತ್ರಿಗಳು ಗೋಕುಲ ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿರುವುದನ್ನು ಮೆಲುಕು ಹಾಕಿದರು. ಗೋಕುಲ ಅತ್ಯಂತ ಕ್ರಿಯಾಶೀಲ ಗ್ರಾಮ. ಕಿರ್ಲೋಸ್ಕರ್ ಕಂಪನಿ ಬಂದ ನಂತರ ಗೋಕುಲ ಗ್ರಾಮದ ಪ್ರತಿ ಮನೆಯವರು ಕಿರ್ಲೋಸ್ಕರ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ದುಡಿಮೆಯನ್ನು ನಂಬಿರುವ ದೊಡ್ಡ ಯುವಕರ ಪಡೆ ಇಲ್ಲಿದೆ. 21 ನೇ ಶತಮಾನ ಜ್ಞಾನದ ಶತಮಾನ. ಮಕ್ಕಳಿಗೆ ವಿದ್ಯೆ ನೀಡಿದರೆ ಅವರು ಜೀವನದಲ್ಲಿ ಮುಂದೆ ಬರುತ್ತಾರೆ. ಈ ಬಗ್ಗೆ ಲಕ್ಷ್ಯ ನೀಡಬೇಕೆಂದು ಕಿವಿ ಮಾತು ಹೇಳಿದರು.
ದುಡಿಮೆಯಿಂದ ಕಟ್ಟಿರುವ ದೇವಸ್ಥಾನದಲ್ಲಿ ಬೇಡಿದ್ದು ದೊರಕುತ್ತದೆ. ಮನಸ್ಸಿನಲ್ಲಿರುವುದನ್ನು ತಿಳಿದು ವರ ಕೊಡುವುದು ಹನುಮ ದೇವರ ವೈಶಿಷ್ಟ್ಯ. ಹನುಮನಿಗೆ ಶ್ರದ್ದಾ ಭಕ್ತಿಯಿಂದ ನಡೆದುಕೊಂಡರೆ ಸಾಕು.ಕೇಳದೆ ಪಡೆಯುವ ಮನೋಶಕ್ತಿ ಇರಬೇಕು. ದುಡಿಮೆ, ಬೆವರಿನಿಂದ ಕಟ್ಟಿರುವ ದೇವಸ್ಥಾನದಲ್ಲಿ ಬೇಡಿದ್ದು ದೊರಕುತ್ತದೆ ಎಂದರು.
ತಮ್ಮ ಸಾರ್ವಜನಿಕ ಜೀವನದ ಮೊದಲ ಭಾಷಣವನ್ನು ಗೋಕುಲದಲ್ಲಿ ಮಾಡಿದ್ದಾಗಿ ಮುಖ್ಯ ಮಂತ್ರಿಗಳು ಸ್ಮರಿಸಿದರು. ಅಲ್ಲಿಂದ ಪ್ರಾರಂಭವಾಗಿದ್ದು ಮಾತನಾಡುವುದನ್ನು ನಿಲ್ಲಿಸಿಲ್ಲ ಎಂದರು. ಗೋಕುಲದಲ್ಲಿನ ಹಲವಾರು ಘಟನೆಗಳನ್ನು ಮೆಲುಕು ಹಾಕಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಕಲ್ಪ ಪುರುಷರು. ಹಲವಾರು ವರ್ಷಗಳು ಆಗದಿದ್ದ ಅಭಿವೃದ್ಧಿಯನ್ನು ಭಾರತ ದೇಶದಲ್ಲಿ ಸಾಧ್ಯವಾಗಿಸಿದ್ದಾರೆ. ಅವರ ಪ್ರಯತ್ನ ದಿಂದಾಗಿ ಅಯೋಧ್ಯೆಯಲ್ಲಿರುವ ದೇವಸ್ಥಾನದ ನಿರ್ಮಾಣ, ಸರ್ವರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ಶ್ರೀ ರಾಮನ ದೇವಸ್ಥಾನ ಅದ್ಭುತವಾಗಿ ನಿರ್ಮಾಣವಾಗುತ್ತಿದೆ. ಕಾಶಿ ವಿಶ್ವನಾಥನ ಅಭಿವೃದ್ಧಿಯನ್ನು ನಾವು ಅಲ್ಲಿಗೆ ಭೇಟಿ ನೀಡಿಯೇ ನೋಡಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಶಾಸಕ ಅರವಿಂದ ಬೆಲ್ಲದ, ಹು- ಧಾ ಮಾಜಿ ಮೇಯರ ಅನಿಲಕುಮಾರ ಪಾಟೀಲ, ಹು ಧಾ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿ ಮಠ ಸೇರಿದಂತೆ ಇತರೆ ಮುಖಂಡರು ಉಪಸ್ಥಿತರಿದ್ದರು.
ಮೊದಲ ಬಾರಿ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ