Kannada NewsKarnataka NewsNationalPolitics

*ಮಂಡ್ಯದಲ್ಲಿ ಮತ್ತೊಂದು ಗಲಾಟೆ*

ಪ್ರಗತಿವಾಹಿನಿ ಸುದ್ದಿ: ಗಣೇಶೋತ್ಸವ ಮೆರವಣಿಗೆಯ ವೇಳೆ ಕಲ್ಲು ತೂರಾಟ ಹಾಗೂ ಪೆಟ್ರೋಲ್ ಬಾಂಬ್ ಎಸೆತ ಘಟನೆ ಮಾಸುವ ಬೆನ್ನಲ್ಲೇ ಮಂಡ್ಯದಲ್ಲಿ ತಡರಾತ್ರಿ ಮತ್ತೊಂದು ವಿವಾದ ನಡೆದಿದೆ. 

ಪಾಂಡವಪುರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿಗೆ ಏಕಾಏಕಿ ನುಗ್ಗಿದ ಪೊಲೀಸರು ಅಲ್ಲಿದ್ದವರನ್ನು ವಶಕ್ಕೆ ಪಡೆಯಲು ವಿಫಲ ಯತ್ನ ನಡೆಸಿದ್ದಾರೆ. ರೊಚ್ಚಿಗೆದ್ದ ಕಾರ್ಯಕರ್ತರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ರಸ್ತೆ ತಡೆದು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಶರಣ್ ಪಂಪ್‌ವೆಲ್ ಮಂಡ್ಯಕ್ಕೆ ಬಂದಿದ್ದಾರೆಂಬ ಮಾಹಿತಿಯ ಮೇಲೆ ಪೊಲೀಸರು ಆರ್‌ಎಸ್‌ಎಸ್‌ ಕಚೇರಿಗೆ ತೆರಳಿದ್ದರು. ಆದರೆ ಪೊಲೀಸರಿಗೆ ಶರಣ್ ಪಂಪ್‌ವೆಲ್‌ ಅಥವಾ ಬೇರಾವುದೇ ವ್ಯಕ್ತಿಗಳ ಮುಖ ಪರಿಚಯ ಇರಲಿಲ್ಲ. ಹೀಗಾಗಿ ಅಲ್ಲಿದ್ದ ಕಾರ್ಯಕರ್ತರನ್ನೇ ಬಂಧಿಸಿ ಎಳೆದೊಯ್ಯಲು ಮುಂದಾದರು ಎಂದು ಆರೋಪಿಸಲಾಗಿದೆ. ಆದರೆ ಸುತ್ತಮುತ್ತಲಿದ್ದ ಜನರು ಒಗ್ಗೂಡಿ ಯಾವುದೇ ನೋಟಿಸ್‌ ಅಥವಾ ಎಫ್‌ಐಆರ್ ಇಲ್ಲದೇ ಹೀಗೆ ಎಳೆದೊಯ್ಯಲು ಸಾಧ್ಯವಿಲ್ಲ ಎಂದು ಪ್ರತಿಭಟಿಸಿ ಪೊಲೀಸರಿಗೆ ರಸ್ತೆ ತಡೆದಿದ್ದಾರೆ.

ಕೊನೆಗೆ ಅಲ್ಲಿದ್ದ 10-15 ಪೊಲೀಸರು 70 ಕ್ಕೂ ಹೆಚ್ಚು ಮಂದಿಯ ಆಕ್ರೋಶಕ್ಕೆ ಮಣಿದಿದ್ದಾರೆನ್ನಲಾಗಿದೆ. ಕೊನೆಗೆ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಸ್ಥಳಕ್ಕೆ ಬರುವವರೆಗೂ ಪೊಲೀಸರು ಇಲ್ಲಿಂದ ಹೋಗಬಾರದು, ಕಚೇರಿಯ ಒಳಗೆ ಬೂಟುಗಾಲಿನಲ್ಲಿ ನುಗ್ಗಿದ ಎಲ್ಲಾ ಪೊಲೀಸರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ತಡರಾತ್ರಿ 1.30 ಕ್ಕೆ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿಯವರು ಸ್ಥಳಕ್ಕಿ ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button