ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎರಡನೇ ರಾಜಧಾನಿ ಸ್ಥಾನಮಾನ ಹೊಂದಿರುವ ಬೆಳಗಾವಿಗೆ ಹೆಚ್ಚಿನ ಕಚೇರಿಗಳನ್ನು ನೀಡಬೇಕೆನ್ನುವ ಬೇಡಿಕೆ ಇರುವ ಸಂದರ್ಭದಲ್ಲೇ ಒಂದಾದ ಮೇಲೊಂದರಂತೆ ಕಚೇರಿಗಳನ್ನು ಇಲ್ಲಿಂದ ಸ್ಥಳಾಂತರಿಸುವ ಮೂಲಕ ಶಾಕ್ ಮೇಲೆ ಶಾಕ್ ನೀಡಲಾಗುತ್ತಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಬೆಂಗಳೂರಿನಿಂದ ಹೆಚ್ಚಿನ ಕಚೇರಿಗಳನ್ನು ತರಬೇಕೆಂದು ಹಲವಾರು ಹೋರಾಟಗಳು ನಡೆದಿವೆ. ವಿವಿಧ ಸರಕಾರಗಳಿಂದ ಭರವಸೆಗಳೂ ಸಿಕ್ಕಿವೆ. ಆದರೆ ಹೊಸದಾಗಿ ಕಚೇರಿಗಳು ಬರುವುದಿರಲಿ, ಇರುವ ಕಚೇರಿಗಳನ್ನೇ ಒಂದೊಂದಾಗಿ ಇಲ್ಲಿಂದ ಕಿತ್ತುಕೊಳ್ಳಲಾಗುತ್ತಿದೆ.
ಬೆಳಗಾವಿಯಲ್ಲಿದ್ದ ರೇಷ್ಮೆ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯನ್ನು 3 ತಿಂಗಳ ಹಿಂದೆಯೇ ಬಿಜೆಪಿ ಸರಕಾರ ಬೆಳಗಾವಿಯಿಂದ ಹಾವೇರಿಗೆ ಸ್ಥಳಾಂತರಿಸಿದೆ. ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರವಿರುವ ಹಾವೇರಿಗಾಗಿ ಬೆಳಗಾವಿಯಿಂದ ರೇಷ್ಮೆ ಇಲಾಖೆ ಕಚೇರಿಯನ್ನು ಕಿತ್ತುಕೊಂಡು ಹೋಗಲಾಗಿದೆ.
ರೇಷ್ಮೆ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಇಲ್ಲಿಂದ ಹೋಗುತ್ತಿದ್ದಂತೆ ಜಿಲ್ಲೆಯಲ್ಲಿದ್ದ 3 ತಾಲೂಕು ಕಚೇರಿಗಳಿಗೂ ಬೀಗ ಹಾಕಲಾಗಿದೆ. ಹಾಗಾಗಿ ರೇಷ್ಮೆ ಇಲಾಖೆ ಬಹುತೇಕ ಬೆಳಗಾವಿಯಿಂದ ಕಾಲ್ಕಿತ್ತಿದೆ.
ಮಂಗಳವಾರ ಬೆಳಗಾವಿಯಲ್ಲಿ ನೂತನ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ್ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಈ ವಿಷಯವನ್ನು ಬಯಲಿಗೆ ತಂದಿದ್ದಾರೆ. ಜೊತೆಗೆ, ರೇಷ್ಮೆ ಜಂಟಿ ನಿರ್ದೇಶಕರ ಕಚೇರಿಯನ್ನು ಮರಳಿ ಬೆಳಗಾವಿಗೆ ತರುವಂತೆ ಠರಾವು ಅಂಗೀಕರಿಸಬೇಕು ಎಂದೂ ಅವರು ಆಗ್ರಹಿಸಿದರು. ಈ ಕುರಿತು ಪರಿಶೀಲಿಸುವ ಭರವಸೆಯನ್ನು ಇಬ್ಬರು ಸಚಿವರು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ