Kannada NewsLatest

ಟೈಟಾನಿಕ್ ಹಡಗು ಮುಳುಗಿದ್ದ ಸ್ಥಳದಲ್ಲಿ ಇನ್ನೊಂದು ದುರಂತ

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ವಿಶ್ವದಾದ್ಯಂತ ಮಾಸದ ನೆನಪಾಗಿ ಉಳಿದ ಟೈಟಾನಿಕ್ ಹಡಗು ದುರಂತ ಸಂಭವಿಸಿದ ಸ್ಥಳದಲ್ಲಿ ಇನ್ನೊಂದು ಅವಘಡ ಸಂಭವಿಸಿದೆ.

ಉತ್ತರ ಅಟ್ಲಾಂಟಿಕ್ ಮಹಾಸಾಗರದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳ ವೀಕ್ಷಣೆಗೆ ಜನರನ್ನು ಕರೆದೊಯ್ಯುತ್ತಿದ್ದ ಟೈಟಾನಿಕ್ ಹೆಸರಿನ ಜಲಾಂತರ್ಗಾಮಿಯೊಂದು ನಾಪತ್ತೆಯಾಗಿದೆ. ಇದರಲ್ಲಿ ಎಷ್ಟು ಜನರಿದ್ದರು ಎಂಬ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಜಲಾಂತರ್ಗಾಮಿಯ ಶೋಧ ಕಾರ್ಯ ಇನ್ನೂ ಮುಂದುವರಿದಿದೆ.

ಕೆನಡಾದ ನೌಕಾಪಡೆ ಮತ್ತು ವಾಣಿಜ್ಯ ಆಳ ಸಮುದ್ರ ಸಂಸ್ಥೆಗಳು, ಸರಕಾರಿ ಏಜೆನ್ಸಿಗಳು ಸೇರಿ ಎರಡು ವಿಮಾನಗಳು, ಜಲಾಂತರ್ಗಾಮಿ ಮತ್ತು ಸೋನಾರ್ ಬೋಯ್‌ಗಳೊಂದಿಗೆ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದುರಂತ ಸಂಭವಿಸಿದ ಪ್ರದೇಶ ನ್ಯೂಫೌಂಡ್‌ಲ್ಯಾಂಡ್‌ನ ಸೇಂಟ್ ಜಾನ್ಸ್‌ನ ದಕ್ಷಿಣಕ್ಕೆ ಸುಮಾರು 700 ಕಿಮೀ ದೂರವಿದೆ. ಆದರೂ ರಕ್ಷಣಾ ಕಾರ್ಯಾಚರಣೆಯನ್ನು ಮ್ಯಾಸಚೂಸೆಟ್ಸ್‌ನ ಬೋಸ್ಟನ್‌ನಿಂದ ನಡೆಸಲಾಗುತ್ತಿದ್ದು ಕಾರ್ಯಾಚರಣೆ ಜಟಿಲವಾಗಿದೆ.

ಕಾಣೆಯಾದ ಕ್ರಾಫ್ಟ್ ಓಷನ್‌ಗೇಟ್‌ನ ಟೈಟಾನ್ ಸಬ್‌ಮರ್ಸಿಬಲ್ ಎಂದು ಹೇಳಲಾಗಿದೆ. ಇದು ಟ್ರಕ್-ಗಾತ್ರದ್ದಾಗಿದ್ದು ಅದು ಐದು ಜನರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯವಾಗಿ ನಾಲ್ಕು ದಿನಗಳ ತುರ್ತು ಆಮ್ಲಜನಕದ ಪೂರೈಕೆಯೊಂದಿಗೆ ಇದರಲ್ಲಿ ಇರುತ್ತದೆ.

ಕಾಣೆಯಾದ ಜಲಾಂತರ್ಗಾಮಿ ನೌಕೆಯಲ್ಲಿದ್ದವರಲ್ಲಿ 58 ವರ್ಷದ ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಮತ್ತು ಪರಿಶೋಧಕ ಹಮೀಶ್ ಹಾರ್ಡಿಂಗ್ ಕೂಡ ಸೇರಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.

1912 ರ ಏಪ್ರಿಲ್ 14ರಂದು ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಬೃಹತ್ ಮಂಜುಗಡ್ಡೆಗೆ ಡಿಕ್ಕಿ ಹೊಡೆದ ಟೈಟಾನಿಕ್ ಹಡಗು ಎರಡು ತುಂಡಾಗಿ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಈ ದುರಂತದಲ್ಲಿ 1500 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ದುರಂತಕ್ಕೆ ನಾಲ್ಕು ದಿನ ಮೊದಲು ಈ ಹಡಗು ಬ್ರಿಟನ್‌ನ ಸೌಥ್ ಆ್ಯಂಪ್ಟನ್ ಬಂದರಿನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿತ್ತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button