ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಳೆದ ಮೂರು ತಿಂಗಳಲ್ಲಿ 5500 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿ. ಚಾಲನೆಯನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ ಬೆಳಗಾವಿ ಹಾಗೂ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುವರ್ಣ ವಿಧಾನಸೌಧದ ಆವರಣದಲ್ಲಿ ಆಯೋಜಿಸಿರುವ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಡಾ : ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಈ ಬಾರಿಯ ಬಜೆಟ್ ನಲ್ಲಿ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ರಚಿಸಲು ಅವಕಾಶ ಕಲ್ಪಿಸಲಾಗಿದೆ.ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲು ತೀರ್ಮಾನ. ಮಾಡಲಾಗಿದೆ. ಈ ಭಾಗದ ಬೃಹತ್ ಯೋಜನೆಗಳು ಹಾಗೂ ಅಭಿವೃದ್ಧಿಗೆ ಅಗತ್ಯವಿರುವ ವಿಶೇಷ ಅನುದಾನ ಹಾಗೂ ಕಾರ್ಯನೀತಿಯನ್ನು ರೂಪಿಸಲು ಮಂಡಳಿ ಕೆಲಸ ಮಾಡಲಿದೆ. ಕಿತ್ತೂರು ಕರ್ನಾಟಕ ಕೃಷಿ, ನೀರಾವರಿ, ಕೃಷಿ ಆಧಾರಿತ ಉದ್ಯಮಗಳಿಗೆ, ಸಕ್ಕರೆ ಕಾರ್ಖಾನೆಗಳಿಗೆ, ಇತರೆ ವ್ಯವಹಾರಕ್ಕೆ, ಶೈಕ್ಷಣಿಕ ಕೇಂದ್ರಗಳಿಗೆ ಅತ್ಯಂತ ಹೆಸರುವಾಸಿ. ಸಮೃದ್ಧ ನಾಡನ್ನು ಯೋಜನಾಬದ್ಧವಾಗಿ ಇನ್ನಷ್ಟು ಅಭಿವೃದ್ಧಿ ಮಾಡಿ ಈ ಭಾಗಕ್ಕೆ ದೊರೆಯಬೇಕಾದ ಎಲ್ಲಾ ಬೃಹತ್ ಯೋಜನೆಗಳನ್ನು, ಮೂಲಸೌಲಭ್ಯ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಯೋಜನೆಗಳನ್ನು ತರುವ ಮೂಲಕ ನಿರಂತರವಾಗಿ ಅಭಿವೃದ್ಧಿ ಸಮೃದ್ದಿ ಆಗಲಿ ಎಂದು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಜನರ ಆಶೋತ್ತರಗಳ ಈಡೇರಿಕೆ
ಪ್ರತಿಮೆ ಸ್ಥಾಪಿಸುವ ಪ್ರೇರಣೆ ಜನರಿಂದ ಬಂದಿದೆ. ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡಿದೆ. ಈ ಭಾಗದ ನೀರಾವರಿಗೆ ಅತಿ ಹೆಚ್ವು ಪ್ರಾಮುಖ್ಯತೆ ನೀಡಿದೆ. ಕೃಷ್ಣಾ ಮೇಲ್ದಂಡೆಯ ಮೂರನೇ ಹಂತ, ನೆನೆಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣ ಮಾಡಿದೆ. ರೈತರಿಗೆ ಏಕರೂಪ ದರವನ್ನು ನೀಡಲು ಕಳೆದ 7-8 ವರ್ಷಗಳಿಂದ ಪ್ರಯತ್ನ ಮಾಡಲಾಗಿತ್ತು. ನಮ್ಮ ಸರ್ಕಾರ ನಿರ್ಣಯ ಮಾಡಿ ಚೆಕ್ ವಿತರಣೆ ಮಾಡಲಾಗುತ್ತಿದೆ. ಕಳಸಾ ಬಂಡೂರಿ ಯೋಜನೆಗೆ ಡಿಪಿಆರ್ ಸಿದ್ಧವಾಗಿದೆ. ಟೆಂಡರ್ ಕರೆಯಲಾಗಿದ್ದು. ಮುಂದಿನ ದಿನಗಳಲ್ಲಿ ನಾವೇ ಚಾಲನೆ ನೀಡುತ್ತೇವೆ ಎಂದರು.
ಸಮಗ್ರ ಕರ್ನಾಟಕ ಅಭಿವೃದ್ಧಿ
ಕಿತ್ತೂರು -ಧಾರವಾಡ ನಡುವೆ 300 ಎಕರೆ ಪ್ರದೇಶದಲ್ಲಿ ಎಫ್.ಎಂ.ಸಿ.ಜಿ ಗೆ ಚಾಲನೆ ನೀಡಿದ್ದು, ಸುಮಾರು ಒಂದು ಲಕ್ಷ ಜನರಿಗೆ ಉದ್ಯೋಗ ಲಭಿಸಲಿದೆ. ವಿಶೇಷ ಹೂಡಿಕೆ ಪ್ರದೇಶ ಸ್ಥಾಪನೆ, ಧಾರವಾಡಕ್ಕೆ ಜಯದೇವ ಆಸ್ಪತ್ರೆ, ಬೆಳಗಾವಿಗೆ ಕಿದ್ವಾಯಿ ಆಸ್ಪತ್ರೆ , ಸ್ಥಾಪಿಸಲಾಗಿದೆ. ಬರುವ ದಿನಗಳಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿಯಾದರೆ ಸಮಗ್ರ ಕರ್ನಾಟಕ ಅಭಿವೃದ್ಧಿ ಯಾಗಿ, ಭಾರತದ ಅಭಿವೃದ್ಧಿ ಯಾಗುತ್ತದೆ.
ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಕೊಡುಗೆ
2025 ಕ್ಕೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಕೊಡುಗೆ ನೀಡಲು ಸಿದ್ಧತೆ ಮಾಡಲಾಗಿದೆ. ಒಂದೂವರೆ ವರ್ಷದಲ್ಲಿ ರೈತರು, ಮಹಿಳೆಯರು, ಯುವಕರು, ದೀನದಲಿತರಿಗೆ ಡಿಬಿಟಿ ಮೂಲಕ ಸೌಲಭ್ಯ ವಿತರಣೆ ಮಾಡಲಾಗಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ಅತಿ ಹೆಚ್ಚು ಹಣವನ್ನು ನೀಡಲಾಗಿದೆ. ಸಮಗ್ರ ಕರ್ನಾಟಕದ ಕಲ್ಪನೆಯಲ್ಲಿ ಕಾರ್ಯೋನ್ಮುಖವಾಗಿದ್ದೇವೆ ಎಂದರು. ಕರ್ನಾಟಕದ ಅಭಿವೃದ್ಧಿ ಜನತೆಯ ದುಡಿಮೆಯಿಂದ ಆಗಿದೆ. ದುಡಿಯುವ ವರ್ಗಕ್ಕೆ ಹೆಚ್ಚಿನ ಬಳ ತಿಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಪ್ರತಿಮೆಗಳಿಂದ ಸ್ಫೂರ್ತಿ
ಸ್ವಾತಂತ್ರ್ಯದ ಕಹಳೆ ಮೊದಲ ಬಾರಿಗೆ ಮೊಳಗಿದ್ದು, ಸಂಗೊಳ್ಳಿ ರಾಯಣ್ಣ ನೇಣುಗಂಬಕ್ಕೆ ಏರಿದ್ದು, ಸ್ವಾತಂತ್ರ್ಯ ಹೋರಾಟ ಮಾಡಿದ ಸಂದರ್ಭದಲ್ಲಿ ಭೇಟಿ ನೀಡಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಕರ್ನಾಟಕಕ್ಕೆ ಬಂದಿದ್ದು ಬೆಳಗಾವಿ ಜಿಲ್ಲೆಯಲ್ಲಿ. ಕರ್ನಾಟಕದಲ್ಲಿ ಅತಿ ಹೆಚ್ವು ಸ್ವಾತಂತ್ರ್ಯ ಹೋರಾಟಗಾರರು ಇರುವುದು ಬೆಳಗಾವಿಯಲ್ಲಿ. ಈ ಪರಂಪರೆ ಇರುವ ಜನರಿಗೆ ಸದಾ ಸ್ಫೂರ್ತಿಯಾಗಿ ನಿಲ್ಲಲು ಈ ಪ್ರತಿಮೆಗಳನ್ನು ಶಕ್ತಿ ಕೇಂದ್ರ ಸುವರ್ಣಸೌಧದ ಮುಂದೆ ಸ್ಥಾಪಿಸಲಾಗಿದೆ ಎಂದರು.
ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ, ಸಚಿವರಾದ ಶಶಿಕಲಾ ಜೊಲ್ಲೆ, ಶಂಕರ್ ಪಾಟೀಲ ಮುನೇನಕೊಪ್ಪ, ಮುರುಗೇಶ್ ನಿರಾಣಿ, ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ದುರ್ಯೋಧನ ಐಹೊಳೆ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಶಾಸಕರಾದ ರಮೇಶ್ ಜಾರಕಿಹೊಳಿ, ಅನಿಲ್ ಬೆನಕೆ, ಅಭಯ್ ಪಾಟೀಲ, ಮಹಾಂತೇಶ್ ದೊಡ್ಡಗೌಡ್ರ, ಮಹಾದೇವಪ್ಪ ಯಾದವಾಡ, ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಪ್ರಕಾಶ್ ಹುಕ್ಕೇರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ