ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪಶ್ಚಿಮ ಘಟ್ಟದ ಸಂರಕ್ಷಣೆಗೆ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ನೀಡಿರುವ ವರದಿಗಳು ಅವೈಜ್ಞಾನಿಕವಾಗಿದ್ದು ಅವುಗಳ ಜಾರಿ ಬೇಡ ಎಂದು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಆಕ್ಷೇಪಿಸಿದ್ದಾರೆ.
ಕಾಂಗ್ರೆಸ್ ನ ಬಿ.ಆರ್. ಪಾಟೀಲ ಅವರು ರಾಜ್ಯಪಾಲರ ವಂದನಾ ನಿರ್ಣಯ ಬೆಂಬಲಿಸಿ ಮಾತನಾಡುವಾಗ ಮಧ್ಯದಲ್ಲೇ ಪ್ರತಿಕ್ರಿಯಿಸಿದ ಅರಗ ಜ್ಞಾನೇಂದ್ರ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ಅವರು ಸಲ್ಲಿಸಿರುವ ವರದಿಗಳು ಅವೈಜ್ಞಾನಿಕವಾಗಿವೆ. ಅವುಗಳನ್ನು ಎಲ್ಲೋ ಕುಳಿತು ತಯಾರಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಅವುಗಳನ್ನು ತಯಾರಿಸಿಲ್ಲ ಎಂದು ದೂರಿದರು.
ಪಶ್ಚಿಮ ಘಟ್ಟಗಳಲ್ಲಿನ ನದಿಗಳು ಉಳಿಯಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅಲ್ಲಿರುವವರ ಬದುಕು ನಮಗೆ ಚೆನ್ನಾಗಿ ಗೊತ್ತಿದೆ. ಹೊಸ ರಸ್ತೆ ಮಾಡುವಂತಿಲ್ಲ, ದುರಸ್ತಿ ಕೈಗೊಳ್ಳುವಂತಿಲ್ಲ, ಚರಂಡಿ ನಿರ್ಮಿಸುವಂತಿಲ್ಲ, ನಮ್ಮ ತೋಟಗಳಿಗೆ ನಾವು ಔಷಧ ಕೂಡ ಸಿಂಪಡಿಸುವಂತಿಲ್ಲ. ಇಂಥ ಸಂದಿಗ್ಧ ಸ್ಥಿತಿ ಪಶ್ಚಿಮ ಘಟ್ಟದಲ್ಲಿದೆ ಎಂದು ಗಮನ ಸೆಳೆದರು.
ಕಾಡುಗಳು ಉಳಿದುಕೊಂಡಿದ್ದರೆ ಅದು ಅರಣ್ಯವಾಸಿಗಳಿಂದಲೇ ಹೊರತು ಅರಣ್ಯ ಇಲಾಖೆಯಿಂದಲ್ಲ. ಅರಣ್ಯ ಕಾಯಿದೆಗಳೇ ನಮಗೆ ಹೊರೆಯಾಗಿದ್ದು ನಮ್ಮ ಸರಕಾರದ ಅವಧಿಯಲ್ಲಿ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಅದರ ನಿರ್ಣಯ ಕೂಡ ಆಗಿದೆ. ಗಣಿಗಾರಿಕೆ ಬೇಕಾದರೆ ನಿಲ್ಲಿಸಿ, ಆದರೆ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿ ಜಾರಿ ಮಾತ್ರ ಬೇಡ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ