Kannada News

ಅಮಿತ್ ಶಾ ಬಂಧಿಸಿ, ಚುನಾವಣೆ ಪ್ರಚಾರದಿಂದ ನಿಷೇಧಿಸಿ – ಕಾಂಗ್ರೆಸ್ ದೂರು ದಾಖಲು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೂಡಲೇ ಬಂಧಿಸಬೇಕು ಮತ್ತು ಕರ್ನಾಟಕದ ಚುನಾವಣೆ ಪ್ರಚಾರದಿಂದ ನಿಷೇಧಿಸಬೇಕು ಎಂದು ಕಾಂಗ್ರೆಸ್ ಪೊಲೀಸ್ ಮತ್ತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಗಲಭೆ ಉಂಟಾಗಲಿದೆ ಎಂದು ಬಹಿರಂಗ ಹೇಳಿಕೆ ನೀಡುವ ಮೂಲಕ ಕೇಂದ್ರ ಗೃಹ ಸಚಿವರು ಮತದಾರರನ್ನು ಹೆದರಿಸುವ ಕೆಲಸ ಮಾಡಿದ್ದಾರೆ. ಇದು ಸಾಮಾನ್ಯ ಪ್ರಕರಣವಲ್ಲ. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜನಸಮಾನ್ಯರು ಇಂತಹ ಹೇಳಿಕೆ ನೀಡಿದ್ದರೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರೆ ಅವರನ್ನು ಇಷ್ಟೊತ್ತಿಗಾಗಲೆ ಬಂಧಿಸಲಾಗುತ್ತಿತ್ತು. ಇಡೀ ರಾಷ್ಟ್ರದ ಗೃಹ ಸಚಿವರು ಇಂತಹ ಹೇಳಿಕೆ ನೀಡಿದ್ದಾರೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾಧ್ಯಮಗಳಿಗೆ ತಿಳಿಸಿದರು.

ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆ:

ಇದು ಅತ್ಯಂತ ಗಂಭೀರವಾದ ಪ್ರಕರಣ. ಕರ್ನಾಟಕ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ. ಇದು ಕರ್ನಾಟಕದ ಬದ್ಧತೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಸಂಘರ್ಷ, ಗಲಭೆಗಳಾಗುತ್ತವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಆಧಾರರಹಿತ ಆರೋಪ ಮಾಡಿ, ಕಾಂಗ್ರೆಸ್ ಗೆ ಯಾರೂ ಮತ ಹಾಕಬಾರದು ಎಂದು ಹೆದರಿಸುವ ಪ್ರಯತ್ನ ಮಾಡಲಾಗಿದೆ. ಅಮಿತ್ ಶಾ ಅವರು ದೇಶದ ಅತ್ಯುನ್ನತ ಸ್ಥಾನದಲ್ಲಿದ್ದು, ಒಂದು ರಾಜ್ಯದ ಜನರಿಗೆ ಈ ರೀತಿ ಬೆದರಿಕೆ ಹಾಕುವುದು ಎಷ್ಟು ಸರಿ? ಇದು ಯಾವ ರೀತಿಯ ಪ್ರಜಾಪ್ರಭುತ್ವ? ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 171ಜಿ, 505, 120ಬಿ, 123 ಅಡಿಯಲ್ಲಿ ದೂರು ದಾಖಲಿಸಿದ್ದೇವೆ.

ಇದೊಂದು ದೊಡ್ಡ ಪಿತೂರಿಯಾಗಿದ್ದು, ಚುನಾವಣಾ ಆಯೋಗ ರಾಜ್ಯ ಚುನಾವಣಾ ಪ್ರಕ್ರಿಯೆಯಲ್ಲಿ ಅಮಿತ್ ಶಾ ಭಾಗವಹಿಸದಂತೆ ನಿಷೇಧ ಹೇರಬೇಕು. ಈ ವಿಚಾರವಾಗಿ ಎಐಸಿಸಿ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಣ್ಣ ಪೋಸ್ಟ್ ಹಾಕಿದ್ದರೆ ಬಂಧಿಸಲಾಗುತ್ತಿತ್ತು. ನಾವು ಪೇಸಿಎಂ ಪೋಸ್ಟರ್ ಅಂಟಿಸಲು ಮುಂದಾದರೆ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದರು. ಆದರೆ ದೇಶದ ಗೃಹ ಸಚಿವರು ರಾಜ್ಯದ ಕಾಂಗ್ರೆಸ್ ಮತದಾರರಿಗೆ ಬೆದರಿಕೆ ಹಾಕಿದರೆ ಯಾಕೆ ಪ್ರಕರಣ ದಾಖಲಿಸಬಾರದು?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಭಾಷಣಗಳಿಗೆ ಅವಕಾಶವಿಲ್ಲ. ಇದು ದೊಡ್ಡ ಪ್ರಕರಣವಾಗಿದ್ದು, ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು ಮಾಧ್ಯಮಗಳಲ್ಲಿದ್ದು, ಈ ನೆಲದ ಕಾನೂನಿನಂತೆ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು.

https://pragati.taskdun.com/siddaramaiahquestionup-cm-yogi-adityanath/
https://pragati.taskdun.com/vidhanasabha-electioncongresscomplaintbjp/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button