ಜಯಶ್ರೀ ಜೆ. ಅಬ್ಬಿಗೇರಿ
ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನಿಗೆ ಅವರನ್ನು ನೋಡಬೇಕೆಂದು ಮನಸ್ಸಾಯಿತು. ಅವರಿದ್ದಲ್ಲಿಗೆ ತೆರಳಿ ಯೋಗಕ್ಷೇಮ ವಿಚಾರಿಸಿದ. ಪ್ರಯಾಣದ ದಣಿವು ಆರಿಸಿಕೊಳ್ಳಲು ಸ್ನಾನ ಮಾಡಬೇಕೆಂದೆನಿಸಿತು. ದ್ರೌಪದಿಗೆ ನೀರು ಕಾಯಿಸಲು ಹೇಳಿದ. ದ್ರೌಪದಿ ದೊಡ್ಡ ಹರವಿಯ ತುಂಬ ನೀರು ಸುರುವಿ ಒಲೆ ಹೊತ್ತಿಸಿದಳು. ಭೀಮಸೇನನು ಒಲೆಗೆ ಸಾಕಷ್ಟು ಕಟ್ಟಿಗೆ ಇಟ್ಟು ಅದರ ಉರಿ ಹೆಚ್ಚಿಸಿದನು. ಸ್ವಲ್ಪ ಸಮಯದ ನಂತರ ದ್ರೌಪದಿ ನೀರು ಬಿಸಿಯಾಗಿರಬಹುದೆಂದು ನೋಡಿದಳು. ಆದರೆ ನೀರು ಸ್ವಲ್ಪವೂ ಬಿಸಿಯಾಗಿರಲಿಲ್ಲ. ಹಾಗಾಗಿ ಭೀಮಸೇನನು ಮತ್ತಷ್ಟು ಕಟ್ಟಿಗೆ ಇಟ್ಟು ಉರಿ ಹೆಚ್ಚಿಸಿದನು. ಸುಮಾರು ಅರ್ಧ ಗಂಟೆ ಬಿಟ್ಟು ದ್ರೌಪದಿ ನೀರು ಬಿಸಿಯಾಗಿದೆಯೇ ಎಂದು ನೋಡಿದಳು. ಆಗಲೂ ನೀರು ಬಿಸಿಯಾಗಿರಲಿಲ್ಲ. ತಣ್ಣಗೆಯೇ ಇತ್ತು. ದ್ರೌಪದಿಗೆ ಮತ್ತು ಭೀಮಸೇನನಿಗೆ ಅಚ್ಚರಿಯೆನಿಸಿತು. ನಂತರ ಈ ವಿಷಯ ಉಳಿದವರಿಗೂ ತಿಳಿಯಿತು. ಎಷ್ಟೇ ಉರಿ ಹೆಚ್ಚಿಸಿದರೂ ನೀರು ಬಿಸಿಯಾಗಲಿಲ್ಲ. ಇದೇಕೆ ಹೀಗಾಗುತ್ತಿದೆ ಎಂದು ಪಾಂಡವರು ತಬ್ಬಿಬ್ಬಾದರು. ಏನು ಮಾಡಬೇಕೆಂದು ತೋಚದೇ ಕೊನೆಗೆ ಕೃಷ್ಣನನ್ನೇ ಕೇಳಿದರು.
’ಕೃಷ್ಟ, ಇದೇನು ಎಷ್ಟು ಬೆಂಕಿ ಹಾಕಿದರೂ ನೀರು ಕಾಯುತ್ತಲೇ ಇಲ್ಲವಲ್ಲ. ಕಾರಣವೇನು? ಇದು ಕೂಡ ನಿನ್ನ ಮಾಯೆಯೇ?’ ಎಂದರು. ಅದಕ್ಕೆ ಕೃಷ್ಣನು ನಗುತ್ತ, ’ಹರವಿಯೊಳಗಿನ ನೀರನ್ನೆಲ್ಲ ಹೊರಕ್ಕೆ ಚೆಲ್ಲಿ. ಬೇರೆ ನೀರನ್ನು ಹಾಕಿ ಆಗ ಕಾಯುತ್ತದೆ ಎಂದು ಹೇಳಿದನು. ಅದನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಯಿತು. ಆದರೂ ಕಾರಣವಿಲ್ಲದೇ ಅವನು ಹಾಗೆ ಹೇಳುವುದಿಲ್ಲವೆಂದು ನೀರನ್ನೆಲ್ಲ ಹೊರಕ್ಕೆ ಚೆಲ್ಲಿದರು. ಹಾಗೆ ನೀರು ಚೆಲ್ಲುವಾಗ ಅಚ್ಚರಿಯೊಂದು ಕಾದಿತ್ತು. ಹರವಿಯ ತಳದಲ್ಲಿ ಕಪ್ಪೆ ಮರಿಯೊಂದು ಓಡಾಡುತ್ತಿತ್ತು. ಅದನ್ನು ಹೊರಕ್ಕೆ ಹಾಕಿ ಪುನಃ ನೀರನ್ನು ತುಂಬಿಸಿದರು. ನೀರು ಚೆನ್ನಾಗಿ ಕಾಯಲಾರಂಭಿಸಿತು.
ಘಟನೆಯ ಹಿಂದಿರುವ ರಹಸ್ಯವನ್ನು ಕುತೂಹಲದಿಂದ ಪಾಂಡವರು ಕೃಷ್ಣನಲ್ಲಿ ಕೇಳಿದರು. ’ಹರವಿಯೊಳಗಿನ ಮರಿ ಕಪ್ಪೆ ನನ್ನನ್ನು ’ಕಾಪಾಡು, ಕಾಪಾಡು’ ಎಂದು ಬೇಡಿಕೊಳ್ಳುತ್ತಿತ್ತು. ಆದ್ದರಿಂದ ನಾನು ನೀರು ಬಿಸಿಯಾಗದಂತೆ ತಡೆ ಹಿಡಿದು ಕಾಪಾಡಿದೆ. ಈಗ ನೀವು ನೀರಿನ ಜೊತೆ ಕಪ್ಪೆಯನ್ನು ಹೊರ ತೆಗೆದುದರಿಂದ ಈಗ ನೀರು ಕಾಯುತ್ತದೆ ಯೋಚಿಸಬೇಡಿ ಎಂದನು. ಕೊಲ್ಲುವವನಿಗಿಂತ ಕಾಯುವವ ದೊಡ್ಡವನು ಎಂಬ ಮಾತಿನಂತೆ ಪರಮ ಶಕ್ತನು ತನ್ನ ಸೃಷ್ಟಿಯನ್ನು ಕಾಪಾಡುತ್ತಾನೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೆ. ಅವನ ಅಣತಿಯ ಹೊರತು ಒಂದು ಹುಲ್ಲು ಕಡ್ಡಿಯೂ ಅಲ್ಲಾಡದು. ಹೂವಿಗೆ ನೀರಿದ್ದಂತೆ ನಮಗೆ ಆತನ ಸ್ಮರಣೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ