ಈ ಕುರಿತು ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಅವರ ಜೊತೆ ನಾನು ಚರ್ಚಿಸಿದ್ದೇನೆ. ಕೇಂದ್ರ ಮತ್ತು ರಾಜ್ಯದ ವೇತನವನ್ನು ಒಂದೇ ದಿನ ಬಿಡುಗಡೆ ಮಾಡಲು ಸಮ್ಮತಿ ನೀಡಿದ್ದೇನೆ. ಪ್ರತಿ ತಿಂಗಳು 10ನೇ ತಾರೀಕಿನೊಳಗೆ ವೇತನ ನೀಡಲಾಗುವುದು. ದಯವಿಟ್ಟು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಮೊದಲು 5500 ರೂ. ಸಂಬಳ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಬಂದಮೇಲೆ ಅದನ್ನು 6,000 ರೂ. ಮಾಡಿದ್ದೇವೆ. ಸಿಎಂ ಜೊತೆಗೆ ಚರ್ಚಿಸಿ ಸಂಬಳವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತೇನೆ. ಪಕ್ಕದ ಆಂಧ್ರ ಪ್ರದೇಶದಲ್ಲಿ 10,000 ರೂ. ನೀಡಲಾಗುತ್ತಿದೆ. ಸದ್ಯ ಆಶಾ ಕಾರ್ಯಕರ್ತೆಯರು 12,000 ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಇಷ್ಟು ಪ್ರಮಾಣದಲ್ಲಿ ಸಂಬಳ ನೀಡಲು ಸಾಧ್ಯವಿಲ್ಲ ಹಣಕಾಸು ಇಲಾಖೆಯ ಜೊತೆಗೂ ಸಭೆ ಮಾಡಬೇಕು ಎಂದರು.
10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುತ್ತೇನೆ. ಲಿಖಿತ ರೂಪದಲ್ಲಿ ಭರವಸೆ ನೀಡಲು ಸಿದ್ಧ. ಆದರೆ ಅವರ ಭರವಸೆಗಳನ್ನು ಈಡೇರಿಸಲು ಬಜೆಟ್ವರೆಗೆ ಕಾಯಬೇಕು ಎಂದು ಹೇಳಿದರು.
ಬೃಹತ್ ಪ್ರತಿಭಟನೆ
ವೇತನ ಹೆಚ್ಚಳ, ಪ್ರೋತ್ಸಾಹ ಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಆಶಾ ಕಾರ್ಯಕರ್ತೆಯರು 10 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಆಶಾ ಕಾರ್ಯಕರ್ತೆಯರು ಗುಲಾಬಿ ಬಣ್ಣದ ಬಟ್ಟೆ ಧರಿಸಿ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಾಗಲಕ್ಷ್ಮೀ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಳೆದ ವರ್ಷ ಜೂನ್ ತಿಂಗಳಲ್ಲಿ ಕೂಡ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಪ್ರತಿಭಟನೆ ನಡೆಸುತ್ತಿದ್ದು, 30 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಪಾಲ್ಗೊಂಡು ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಆಶಾ ಕಾರ್ಯಕರ್ತೆಯರ ಬೇಡಿಕೆ ಇಂತಿದೆ:
1. ಮಾಸಿಕ 12,000 ರೂ. ವೇತನ ನೀಡಬೇಕು
2. ಆಶಾ ಸಾಫ್ಟ್ ಅಥವಾ ಆರ್ಸಿಎಚ್ ಪೋರ್ಟಲ್ ಜೋಡಣೆ ರದ್ದಾಗಬೇಕು
3. ಎಂಸಿಟಿಎಸ್ ಸೇವೆಗಳ ಪ್ರೋತ್ಸಾಹಧನ ಒಂದೇ ಬಾರಿಗೆ ಪಾವತಿಸಬೇಕು
4. 15 ತಿಂಗಳ ಬಾಕಿ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು
5. ಜನಸಂಖ್ಯೆಗೆ ತಕ್ಕಂತೆ ಎಂಸಿಟಿಎಸ್ ಪ್ರೋತ್ಸಾಹಧನ ಹೆಚ್ಚಿಸಬೇಕು
5. ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು
6. ಮಾರಣಾಂತಿಕ ಕಾಯಿಲೆ / ಮರಣ ಹೊಂದಿದರೆ ನೆರವು ನೀಡಬೇಕು
7. ವಿವಿಧ ಸರ್ವೆಗಳ ಬಾಕಿ ಪ್ರೋತ್ಸಾಹಧನ ಕೂಡಲೇ ಪಾವತಿಸಬೇಕು
8. ಜಿಲ್ಲಾ ಮತ್ತು ತಾಲೂಕು ಕೇಂದ್ರದ ಸಭೆಗಳಿಗೆ ದಿನಭತ್ಯೆ ಹೆಚ್ಚಿಸಬೇಕು
9. ದಿನಕ್ಕೆ 300 ರೂ. ನಿಗದಿಪಡಿಸಿ, ಅಂದೇ ಪಾವತಿಸಬೇಕು
10. ಆಶಾ ಸುಗಮಗಾರರನ್ನು ನೇಮಿಸಿ, ಮಾಸಿಕ 12,000 ರೂ. ಜೊತೆಗೆ ಟಿಎ ನೀಡಬೇಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ