ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಪಾಲಿಕೆಯಲ್ಲಿ ಎಮ್.ಇ.ಎಸ್.ಹೊರಗಟ್ಟಿ ಸರ್ವ ಭಾಷಿಕ ಸಮವಿಚಾರ ವೇದಿಕೆಯನ್ನು ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಧಿಕಾರಕ್ಕೆ ತಂದಿದ್ದರು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸ್ಮರಿಸಿದ್ದಾರೆ.
2001.ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಿತು. ಮರಾಠಿ ಭಾಷಿಕರದ್ದೇ ಬಹುಮತ ಬಂತು. ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮಹಾರಾಷ್ಟ್ರ ಏಕೀಕರಣ ಸಮಿತಿ ಹವಣಿಸತೊಡಗಿತು. ಹೇಗಾದರೂ ಮಾಡಿ ಅವರಿಗೆ ಅಧಿಕಾರ ತಪ್ಪಿಸಬೇಕೆಂದು ನಾನು ಹಾಗೂ ಕೆಲವು ಗೆಳೆಯರು ಪ್ರಯತ್ನ ಆರಂಭಿಸಿದೆವು. ಈ ಯತ್ನಕ್ಕೆ ಕೈಗೂಡಿಸಿದವರು ದಿ.ಸಂಭಾಜಿ ಪಾಟೀಲ. ಆಗ ವ್ಹಿ.ಎಸ್.ಕೌಜಲಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು. ಅಮರಸಿಂಹ ಪಾಟೀಲರು ಲೋಕಸಭೆ ಸದಸ್ಯರು. ನಮ್ಮ ವಿಚಾರವನ್ನು ಇಬ್ಬರಿಗೂ ತಿಳಿಸಿದೆ.
ಒಂದು ದಿನ ಮುಂಜಾನೆ ನಾನು ಮತ್ತು ದಿ.ಶಂಕರ ಮುನವಳ್ಳಿ ಸೇರಿ ಅಮರಸಿಂಹ ಪಾಟೀಲರನ್ನು ಕರೆದುಕೊಂಡು ಬೆಳಗಾವಿಯ ಹೊರ ವಲಯದಲ್ಲಿರುವ ಸಂಭಾಜಿ ಪಾಟೀಲರ ತೋಟಕ್ಕೆ ಹೋದೆವು. ಶಂಕರ ಬಳಿಯಿದ್ದ ಮೊಬೈಲ್ ಮೂಲಕವೇ ಅಂದಿನ ಮುಖ್ಯಮಂತ್ರಿ ಎಸ್.ಎಮ್. ಕೃಷ್ಣರನ್ನು ಸಂಪರ್ಕಿಸಿದೆವು. ಬೆಳಗಾವಿ ಪಾಲಿಕೆಯಲ್ಲಿ ಮ.ಏ.ಸಮಿತಿಯು ಅಧಿಕಾರಕ್ಕೆ ಬರದಂತೆ ತಡೆಯಲು ಕನ್ನಡ, ಉರ್ದು ಮತ್ತು ಮರಾಠಿ ಭಾಷಿಕರು ಒಗ್ಗೂಡಲು ತಾವು ಬೆಂಬಲ ನೀಡಬೇಕೆಂದು ಅಮರಸಿಂಹ ಪಾಟೀಲರು ಕೃಷ್ಣರನ್ನು ಕೋರಿದರು. ಈ ಪ್ರಸ್ತಾವನೆಗೆ ತಕ್ಷಣ ಒಪ್ಪಿದ ಅವರು ಎಲ್ಲರನ್ನೂ ಬೆಂಗಳೂರಿಗೆ ಕರೆತರುವಂತೆ ಸೂಚಿಸಿದರು.
ಈ ಬೆಳವಣಿಗೆಯ ನಂತರ ಎಲ್ಲ ಭಾಷಿಕರು ಸಭೆ ಸೇರಿ ಚರ್ಚಿಸಿದರು. ನಮ್ಮವರು ಅಧಿಕಾರಕ್ಕೆ ಬರುವದು ನಮ್ಮಲ್ಲಿಯೇ ಕೆಲವರಿಗೆ ಬೇಕಾಗಿರಲಿಲ್ಲ. ಆದರೆ ಎಲ್ಲರೂ ಸೇರಿ ಬೆಂಗಳೂರಿಗೆ ತೆರಳಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ಸೇರಿದೆವು. ಕೃಷ್ಣ ಅವರ ಸಮ್ಮುಖದಲ್ಲಿ ಸರ್ವ ಭಾಷಿಕ ಸಮವಿಚಾರ ವೇದಿಕೆ ಘೋಷಣೆಯಾಯಿತು. ಅಮರಸಿಂಹ ಅವರ ಅರ್ಧ ಗಂಟೆಯ ಭಾಷಣವನ್ನು ಕೃಷ್ಣ ಅವರು ತದೇಕ ಚಿತ್ತದಿಂದ ಕೇಳಿದರಲ್ಲದೇ ಬೆಳಗಾವಿ ಪಾಲಿಕೆಯಲ್ಲಿ ಮ.ಏ.ಸಮಿತಿಯನ್ನು ಅಧಿಕಾರದಿಂದ ಹೊರಗಿಟ್ಟು ಅಭಿವೃದ್ಧಿ ಪರವಾದ ಎಲ್ಲ ಭಾಷಿಕರು ಅಧಿಕಾರಕ್ಕೆ ಬರುವದಕ್ಕೆ ಬೆಂಬಲ ಘೋಷಿಸಿದರು.
ಬೆಳಗಾವಿಗೆ ವಾಪಸ್ ಆದ ನಂತರ ಸಂಭಾಜಿ ಪಾಟೀಲರ ಗುಂಪಿನ ಶಾಹೂನಗರದ ಸದಸ್ಯೆ ವಂದನಾ ಬೆಳಗುಂದಕರ ಮಹಾಪೌರರಾದರು ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ