ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಬೇಕಾದ ಮಾರ್ಗಸೂಚಿ ರೂಪುರೇಷೆಗಳ ಬಗ್ಗೆ ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸಂಜೆ ನಡೆದ ಕಾಂಗ್ರೆಸ್ ಚುನಾವಣೆ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾಹಿತಿ ನೀಡಿದರು.
ಎರಡೂವರೆ ಗಂಟೆಗಳ ಕಾಲ ಚರ್ಚಿಸಿದ್ದೇವೆ. 1350 ಅರ್ಜಿಗಳು ಬಂದಿವೆ. ನಮ್ಮ ಪಕ್ಷದ ಆಧಾರ ಸ್ಥಂಬಗಳಾಗಿರುವ ಜಿಲ್ಲಾ ಕಾಂಗ್ರೆಸ್ ಮತ್ತು ಬೇರೆ ಮುಖಂಡರಿಂದ ಅಭಿಪ್ರಾಯ ಪಡೆಯಬೇಕು. ಕಾರ್ಯಕರ್ತರು, ಮುಖಂಡರ ಧ್ವನಿಯೇ ಕಾಂಗ್ರೆಸ್ ಧ್ವನಿಯಾಗಬೇಕು. ಎಲ್ಲಾ ಅರ್ಜಿಗಳನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಗೆ ವಾಪಸ್ ಕಳಿಸುತ್ತೇವೆ. ಜಿಲ್ಲಾ ಸಮಿತಿಯಲ್ಲಿ ಕಾರ್ಯಾಧ್ಯಕ್ಷರಿದ್ದಾರೆ. 5 ಭಾಗ ಮಾಡಿದ್ದೇವೆ. ಕಾರ್ಯಾಧ್ಯಕ್ಷರ ಜೊತೆಗೆ ಎಐಸಿಸಿ ಸದಸ್ಯರೆಲ್ಲ ಕುಳಿತು ಚರ್ಚಿಸುತ್ತಾರೆ. ರಾಜ್ಯ ಮಟ್ಟದಲ್ಲಿ ಸಮಿತಿ ರಚನೆ ಮಾಡಿ ಪ್ರತಿ ಜಿಲ್ಲೆಗೆ ಇಬ್ಬರು ಸದಸ್ಯರನ್ನು ಕಳಿಸುತ್ತೇವೆ. ಅವರೆಲ್ಲ ಸೇರಿ ಚರ್ಚಿಸಿ ಸಮನ್ವಯ ಮಾಡಿ, ಗರಿಷ್ಟ 1 ರಿಂದ 3 ಹೆಸರನ್ನು ರಾಜ್ಯಕ್ಕೆ ಕಳಿಸುತ್ತಾರೆ. ಕಾರ್ಯಕರ್ತರ ಅಭಿಪ್ರಾಯ ಪಡೆದು 31ರೊಳಗೆ ನಮಗೆ ಕಳಿಸಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
ನಂತರ ರಾಜ್ಯ ಮಟ್ಟದ ಸಮಿತಿ ಕುಳಿತು ಮತ್ತೆ ಚರ್ಚಿಸುತ್ತೇವೆ. ಯಾರೂ ಅಭ್ಯರ್ಥಿ ಘೋಷಣೆ ಮಾಡಲು ಅವಕಾಶವಿಲ್ಲ. ಮೀರಿದರೆ ನೋಟೀಸ್ ಜಾರಿ ಮಾಡುತ್ತೇವೆ. ಸಧ್ಯಕ್ಕೆ ಅರ್ಜಿ ಹಾಕಿದವರನ್ನು ಪರಿಗಣಿಸುತ್ತೇವೆ. ಕೆಲವೆಡೆ ಓಪನ್ ಇಟ್ಟುಕೊಳ್ಳುತ್ತೇವೆ. ಇನ್ನೂ ಒಳ್ಳೆಯ ಅಭ್ಯರ್ಥಿ ಸಿಕ್ಕಿದರೆ ಅವಕಾಶ ಕೊಡುತ್ತೇವೆ ಎಂದೂ ಅವರು ತಿಳಿಸಿದರು.
ವಿಧಾನಸೌಧ ಸಭಾಂಗಣದಲ್ಲಿ ಮಹಾತ್ಮಾ ಗಾಂಧಿ, ಅಂಬೇಡ್ಕರ್ ಫೋಟೋ ಹಾಕುತ್ತೇವೆ. ಬನ್ನಿ ಎಂದು ಸ್ಪೀಕರ್ ಕಚೇರಿಯಿಂದ ಫೋನ್ ಬಂದಿತ್ತು. ಸಾವರ್ಕರ್ ಫೋಟೋ ಹಾಕೋದು ನನಗೆ ಗೊತ್ತಿಲ್ಲ ಎಂದ ಅವರು, ಸದನದೊಳಗೆ ಹೋರಾಟದ ಕುರಿತು ಇನ್ನೂ ಚರ್ಚೆಯಾಗಿಲ್ಲ ಎಂದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಸತೀಶ್ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ, ಮಾಜಿ ಸಚಿವರಾದ ಎಚ್ ಕೆ ಪಾಟೀಲ್, ಕೆ ಜೆ ಜಾರ್ಜ್, ಎಚ್ ಸಿ ಮಹದೇವಪ್ಪ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಪೂರ್ಣ ವಿವರ:
ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ಪಕ್ಷದ ಆಧಾರ ಸ್ಥಂಭವಾಗಿರುವ ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಹಾಗೂ ವಿವಿಧ ಘಟಕಗಳ ಮುಖಂಡರ ಜೊತೆ ಚರ್ಚೆ ಮಾಡಿ ಅವರ ಅಭಿಪ್ರಾಯ ಪಡೆಯಲಾಗುವುದು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಧ್ವನಿ ಪಕ್ಷದ ಧ್ವನಿಯಾಗಬೇಕು ಎಂಬುದು ಈ ಸಮಿತಿಯ ತೀರ್ಮಾನವಾಗಿದೆ.
ಹೀಗಾಗಿ ಇದುವರೆಗೂ ಬಂದಿರುವ ಅರ್ಜಿಗಳನ್ನು ಆಯಾ ಜಿಲ್ಲಾ ಕಾಂಗ್ರೆಸ್ ಗಳಿಗೆ ಕಳುಹಿಸಿಕೊಡುತ್ತೇವೆ. ಜಿಲ್ಲಾ ಕೇಂದ್ರಗಳಲ್ಲಿ ಪ್ರತಿ ಬ್ಲಾಕ್ ಮಟ್ಟದ ನಾಯಕರನ್ನು ಕರೆಸಿ ಚರ್ಚೆ ಮಾಡಲಾಗುವುದು. ರಾಜ್ಯಮಟ್ಟದ ಚುನಾವಣಾ ಸಮಿತಿಯಿಂದ ಇಬ್ಬರು ಸದಸ್ಯರಿಗೆ ಒಂದೊಂದು ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗುವುದು. ಪಕ್ಷದ 5 ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಚುನಾವಣಾ ಸಮಿತಿ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಸದಸ್ಯರು, ಪಕ್ಷದ ಪದಾಧಿಕಾರಿಗಳು ಎಲ್ಲರೂ ಸೇರಿ ಚರ್ಚೆ ಮಾಡುತ್ತಾರೆ. ಆದಷ್ಟು ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳನ್ನು ಸೇರಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಲಾಗುವುದು.
ಪ್ರತಿ ಕ್ಷೇತ್ರಗಳಲ್ಲಿ 1 ರಿಂದ 3 ಆಕಾಂಕ್ಷಿಗಳ ಹೆಸರನ್ನು ಪರಿಷ್ಕರಿಸಿ ಕೆಪಿಸಿಸಿಗೆ ಕಳುಹಿಸುವಂತೆ ನಾವು ಸೂಚನೆ ನೀಡಿದ್ದೇವೆ. ಒತ್ತಡ ಹೆಚ್ಚಾಗಿದ್ದ ಸಂದರ್ಭದಲ್ಲಿ ಅಂತಹ ಕ್ಷೇತ್ರಗಳ ವಿಚಾರವನ್ನು ರಾಜ್ಯಮಟ್ಟದಲ್ಲಿ ನಾವು ಕೂತು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ.
ಪಕ್ಷದ ಕಾರ್ಯಕರ್ತರು ನಮ್ಮ ಆಧಾರ ಸ್ಥಂಭವಾಗಿದ್ದು, ಅವರ ಅಭಿಪ್ರಾಯ ಪಡೆದುಕೊಂಡು ಡಿಸೆಂಬರ್ 31ರ ಒಳಗಾಗಿ ಈ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಬೇಕು. ಜನವರಿ 1ರ ಒಳಗಾಗಿ ಎಲ್ಲಾ ಜಿಲ್ಲೆಗಳಿಂದ ಆಯಾ ಜಿಲ್ಲೆಗಳ ಕ್ಷೇತ್ರದ ಪರಿಷ್ಕೃತ ಅರ್ಜಿಗಳ ಪಟ್ಟಿಯನ್ನು ನೀಡಬೇಕು. ನಂತರ ರಾಜ್ಯ ಮಟ್ಟದ ಚುನಾವಣಾ ಸಮಿತಿಯು ಮತ್ತೆ ಸಭೆ ಸೇರಿ ಎಲ್ಲ ಮಾನದಂಡಗಳನ್ನು ಅನುಸರಿಸಿ ಮುಂದಿನ ಪ್ರಕ್ರಿಯೆಯನ್ನು ನಡೆಸಲಿದೆ.
ನಿಮ್ಮ ಪಕ್ಷದ ಬೇರೆ ನಾಯಕರು ಕೆಲವು ಕಡೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಾರೆ ಎಂದು ಕೇಳಿದಾಗ, ‘ ಪಕ್ಷದ ಅಭ್ಯರ್ಥಿಗಳನ್ನು ಯಾರೂ ಘೋಷಿಸುವಂತಿಲ್ಲ. ಯಾರಾದರೂ ಪಕ್ಷದ ಇತಿಮಿತಿಯನ್ನು ಮೀರಿದರೆ ಅಂತಹವರಿಗೆ ನೋಟಿಸ್ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಅರ್ಜಿ ಹಾಕಿರುವವರ ಜೊತೆಗೆ ಅರ್ಜಿ ಹಾಕದವರ ಹೆಸರನ್ನು ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ, ‘ ಸದ್ಯಕ್ಕೆ ನಾವು ಯಾರಿಲ್ಲ ಅರ್ಜಿ ಹಾಕಿದ್ದಾರೆ ಅವರ ಹೆಸರುಗಳನ್ನು ಮಾತ್ರ ಪರಿಗಣಿಸುತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಅಭ್ಯರ್ಥಿ ಸಿಕ್ಕಿದರೆ ಅವರನ್ನು ಕಣಕ್ಕಿಳಿಸುವ ಅವಕಾಶವನ್ನು ಇಟ್ಟುಕೊಂಡಿರುತ್ತೇವೆ ‘ ಎಂದು ತಿಳಿಸಿದರು.
ಸಂಕ್ರಾಂತಿ ಒಳಗಾಗಿ ಪಕ್ಷದ ಅಭ್ಯರ್ಥಿ ಪ್ರಕಟ ಮಾಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ, ‘ ಈ ತಿಂಗಳು 31ರ ಒಳಗಾಗಿ ಈ ಪ್ರಕ್ರಿಯೆ ಮುಕ್ತಾಯಗೊಳಿಸಿ ಜನವರಿ ಒಂದರ ಒಳಗಾಗಿ ಪರಿಷ್ಕೃತ ಪಟ್ಟಿಯನ್ನು ನೀಡಬೇಕು ಎಂದು ಸೂಚಿಸಿದ್ದೇವೆ. ಜನವರಿ 5ರಂದು ರಾಜ್ಯಮಟ್ಟದ ಚುನಾವಣೆ ಸಮಿತಿಯು ಮತ್ತೆ ಸಭೆ ನಡೆಸಬೇಕು, ಆದಷ್ಟು ಬೇಗ ಜನ ಜನವರಿ 15ರ ಒಳಗಾಗಿ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾವು ಪ್ರಯತ್ನ ಮಾಡುತಿದ್ದೇವೆ.
ಸಾವರ್ಕರ್ ಅವರ ಭಾವಚಿತ್ರ ಅನಾವರಣ ಕುರಿತು ಕೇಳಿದ ಪ್ರಶ್ನೆಗೆ, ‘ ಈ ಕುರಿತಾಗಿ ನಮಗೆ ಯಾವುದೇ ಮಾಹಿತಿ ಇಲ್ಲ. ನಾವು ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕುತ್ತಿದ್ದೇವೆ ಈ ಕಾರ್ಯಕ್ರಮಕ್ಕೆ ನೀವು ಆಗಮಿಸಬೇಕು ಎಂದು ಸ್ಪೀಕರ್ ಅವರ ಕಚೇರಿಯಿಂದ ನಮಗೆ ಆಹ್ವಾನ ಬಂದಿದೆ. ಇತರ ವಿಚಾರದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರದ ಕುರಿತು ನಮಗೆ ಗೊತ್ತಿಲ್ಲದ ಕಾರಣ ನಾವು ಮಾತನಾಡುವುದಿಲ್ಲ. ಈ ವಿಚಾರವಾಗಿ ನಿಮ್ಮಿಂದ ಈಗ ಮಾಹಿತಿ ಸಿಕ್ಕಿದೆ ಈ ಕುರಿತು ಈಗ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ ‘ ಎಂದರು.