ಖ್ಯಾತ ಜೋತಿಷಿ ಮಹಿಳಾ ಪಿಎ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಖ್ಯಾತ ಜ್ಯೋತಿಷಿ ಪ್ರಮೋದ್ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜ್ಯೋತಿಷಿಯ ಮಹಿಳಾ ಪಿಎ ಹಾಗೂ ಆಕೆಯ ಗ್ಯಾಂಗ್ ನ್ನು ತಮಿಳುನಾಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮೂರು ದಿನಗಳ ಹಿಂದೆ ಜ್ಯೋತಿಷಿ ಪ್ರಮೋದ್ ಅವರ ಬೆಂಗಳೂರಿನ ಕೆಂಗೇರಿ ಬಳಿ ನಿವಾಸದಲ್ಲಿ ದರೋಡೆ ನಡೆದಿತ್ತು. ಜ್ಯೋತಿಷ್ಯ ಕೇಳುವ ನೆಪದಲ್ಲಿ ಮನೆಗೆ ಬಂದ ಖದೀಮರು ಹಾಡ ಹಗಲೇ ಜ್ಯೋತಿಷಿಯನ್ನು ಕಟ್ಟಿಹಾಕಿ, ಹಲ್ಲೆ ನಡೆಸಿ, ಮನೆಯಲ್ಲಿದ್ದ 250 ಗ್ರಾಂ ಚಿನ್ನಾಭರಣ, 5 ಲಕ್ಷ ನಗದು ದೋಚಿ ಪರಾರಿಯಾಗಿದ್ದರು.

ಈ ಕೃತ್ಯದ ಹಿಂದೆ ಜ್ಯೋತಿಷಿ ಪ್ರಮೋದ್ ಪಿಎ ಮೇಘನಾ ಕೈವಾಡವಿತ್ತು ಎಂಬುದು ಪೊಲೀಸ್ ವಿಚಾರಣೆಯಿಂದ ಬಯಲಾಗಿದೆ.

ಮೇಘನಾ ಎಂಬ ಮಹಿಳೆ ಜ್ಯೋತಿಷಿ ಪ್ರಮೋದ್ ಪಿಎ ಆಗಿ ಕೆಲಸ ಮಾಡುತ್ತಿದ್ದರು. ಜ್ಯೋತಿಷಿ ಬಳಿ ಸಾಲ ಕೇಳಿದ್ದಳು. ಆದರೆ ಜ್ಯೋತಿಷಿ ಸಾಲ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ದರೋಡೆ ಮಾಡುವ ಯೋಜನೆ ಹಾಕಿದ್ದಳು. ಅದರಂತೆ ತಮಿಳುನಾಡು ಮೂಲದ ಮೂವರು ಖದೀಮರಿಗೆ ಸುಪಾರಿ ಕೊಟ್ಟಿದ್ದಳು ಎನ್ನಲಾಗಿದೆ. ಪಕ್ಕಾ ಪ್ಲಾನ್ ಪ್ರಕಾರ ಜ್ಯೋತಿಷಿ ಮನೆಗೆ ಬಂದ ದರೋಡೆಕೋರರು ಜ್ಯೋತಿಷಿಯನ್ನು ಥಳಿಸಿ, ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪರಾರಿಯಾಗಿದ್ದರು.

ಪೊಲೀಸರು ಪರಿಶೀಲನೆಗೆ ಬಂದಾಗ ಮೇಘನಾ ತನಗೇನೂ ಗೊತ್ತಿಲ್ಲ ಎಂಬಂತೆ ನಟಿಸಿದ್ದಳು. ಬಳಿಕ ತಮಿಳುನಾಡಿಗೆ ಎಸ್ಕೇಪ್ ಆಗಿದ್ದಳು. ಅನುಮಾನಗೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದೀಗ ತಮಿಳುನಾಡಿನ ಸೇಲಂ ನಲ್ಲಿ ಆರೋಪಿ ಪಿಎ ಮೇಘನಾ ಹಾಗೂ ಅಕೆಯ ಗ್ಯಾಂಗ್ ನ್ನು ಬಂಧಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button