Kannada NewsKarnataka NewsLatest

*ರಾಹುಲ್ ನ್ಯಾಯ ಯಾತ್ರೆ ಮೇಲಿನ ದಾಳಿ ಹೇಯ ಕೃತ್ಯ: ಈಶ್ವರ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ, ಮೈಸೂರು, ಜ.23: ಸಮಾಜದ ಎಲ್ಲರಿಗೂ ಸಮಾನತೆ, ಸೌಲಭ್ಯ, ನ್ಯಾಯ ದೊರೆತಾಗ ಮಾತ್ರ ರಾಮರಾಜ್ಯ ಆಗುತ್ತದೆ, ಆದರೆ, ರಾಹುಲ್ ಗಾಂಧೀ ಅವರ ನ್ಯಾಯ ಯಾತ್ರೆಯ ಮೇಲೆ ದಾಳಿ ನಡೆಯುತ್ತಿರುವಾಗ ನ್ಯಾಯ ಸಿಗಲು ಹೇಗೆ ಸಾಧ್ಯ, ರಾಮರಾಜ್ಯ ಆಗಲು ಹೇಗೆ ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರಶ್ನಿಸಿದ್ದಾರೆ.


ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯ ವೇಳೆ ಮಾತನಾಡಿದ ಅವರು, ರಾಜಕೀಯ ಸ್ವಾರ್ಥಕ್ಕಾಗಿ ಇಂದು ದೇಶವನ್ನು ಧರ್ಮ, ಜಾತಿ ಹೆಸರಲ್ಲಿ ಒಡೆಯಲಾಗುತ್ತಿದೆ. ಇದು ದೇಶದ ಸಮಗ್ರತೆ, ಸಾರ್ವಭೌಮತ್ವಕ್ಕೆ ಮಾರಕವಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ರಾಹುಲ್ ಜೀ ಅವರ ನ್ಯಾಯ ಯಾತ್ರೆಯಲ್ಲಿ ಬಿಜೆಪಿಯ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಘೋಷಣೆ ಕೂಗಿ, ದಾಳಿ ಮಾಡುತ್ತಿರುವುದು ಅಕ್ಷಮ್ಯ ಮತ್ತು ಹೇಯ ಕೃತ್ಯ ಎಂದರು.

ಬಿಜೆಪಿ ಬಾಯಲ್ಲಿ ಶಾಂತಿ ಮಂತ್ರ ಪಠಿಸುತ್ತದೆ. ಬಗಲಲ್ಲಿ ದೊಣ್ಣೆ ಹಿಡಿದು ಹಲ್ಲೆಗೆ ಹೋಗುತ್ತದೆ. 25 ಬಿಜೆಪಿ ಕಾರ್ಯಕರ್ತರು ಬಡಿಗೆ ಹಿಡಿದು ತಮ್ಮ ನ್ಯಾಯ ಯಾತ್ರೆಯ ಬಸ್ ಹಿಂದೆ ಬಂದಿದ್ದರು ಎಂದು ನಾಗಾಂವ್ ನಲ್ಲಿ ಸ್ವತಃ ರಾಹುಲ್ ಗಾಂಧೀ ಅವರೇ ಹೇಳಿದ್ದಾರೆ. ಜೊತೆಗೆ ಅಸ್ಸಾಂನ ಬಿಜೆಪಿ ಸರ್ಕಾರ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗದಂತೆ ಆ ರಾಜ್ಯದ ಜನತೆಗೆ ಬೆದರಿಕೆ ಹಾಕುತ್ತಿದೆ. ನಾವು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೋ ಅಥವಾ ಸರ್ವಾಧಿಕಾರಿ ರಾಷ್ಟ್ರದಲ್ಲಿದ್ದೇವೆಯೋ ಎಂದು ಪ್ರಶ್ನಿಸಿದರು.


ಬಿಜೆಪಿ ಬಾವುಟ ಹಿಡಿದು ಬಂದ ಗುಂಪು ನ್ಯಾಯ ಯಾತ್ರೆಗೆ ಅಡ್ಡಿಪಡಿಸುತ್ತಿದೆ. ಆದರೆ ನ್ಯಾಯ ಯಾತ್ರೆ ನಿಲ್ಲುವುದಿಲ್ಲ. ರಾಹುಲ್ ಗಾಂಧೀ ಅವರ ಭಾರತ್ ಜೋಡೋ ಯಾತ್ರೆಗೆ ಮತ್ತು ನ್ಯಾಯಯಾತ್ರೆಗೆ ದೇಶಾದ್ಯಂತ ದೊರಕುತ್ತಿರುವ ಜನ ಬೆಂಬಲದಿಂದ ಬಿಜೆಪಿ ವಿಚಲಿತವಾಗಿದೆ. ಹೀಗಾಗಿಯೇ ಈ ರೀತಿ ದಾಳಿ ಮಾಡುತ್ತಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲ ಪಕ್ಷಗಳಿಗೂ ಸಮಾನವಾದ ಅವಕಾಶ ಇರಬೇಕು ಎಂದು ಹೇಳಿದರು.


ಕಾಂಗ್ರೆಸ್ ಆಡಳಿತದ ಕಾಲದಲ್ಲಿ ಮುಜರಾಯಿ ಇಲಾಖೆ ಮತ್ತು ಪುರಾತತ್ವ ಸರ್ವೇಕ್ಷಣಾ ಇಲಾಖೆ ವತಿಯಿಂದ ಹಲವಾರು ದೇವಾಲಯಗಳು ಸಂರಕ್ಷಣೆ ಮಾಡಲಾಗಿದೆ, ಆದರೆ ಅದನ್ನು ಕಾಂಗ್ರೆಸ್ ಎಂದಿಗೂ ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ, ಆದರೆ ನಕಲಿ ದೇಶಭಕ್ತರು ಇದನ್ನೇ ಚುನಾವಣಾ ತಂತ್ರ ಮಾಡುತ್ತಿದ್ದಾರೆ ಎಂದು ಹೇಳಿದರು.


ನಮಗೆಲ್ಲರಿಗೂ ಶ್ರೀ ರಾಮನ ಬಗ್ಗೆ ಗೌರವ ಪ್ರೀತಿ ಇದೆ, ನಾವು ಕೂಡ ಜೈ ಶ್ರೀರಾಮ್, ರಾಮ್ ರಾಮ್ ಎನ್ನುತ್ತೇವೆ. ಈ ಘೋಷಣೆಯಿಂದ ಭಕ್ತಿ ಶ್ರದ್ಧೆ ಮೂಡಬೇಕೆ ಹೊರತು ಅದು ದ್ವೇಷ ಹುಟ್ಟಿಸುವಂತಿರಬಾರದು ನಕಲಿ ದೇಶಭಕ್ತರು ಈ ಘೋಷಣೆಯನ್ನು ಸಂಘರ್ಷಕ್ಕೆ ಬಳಸುತ್ತಿದ್ದಾರೆ, ಇದು ಸರ್ವತ ಸಲ್ಲ ಎಂದರು.

Related Articles

Back to top button