Kannada NewsKarnataka NewsLatest

ಸಚಿವ ರಮೇಶ ಜಾರಕಿಹೊಳಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಪ್ರತಿಭಟನೆ ನಡೆಸಿದರು.
ಗುರುವಾರ ಇಲ್ಲಿಯ ಬಸವೇಶ್ವರ ವೃತ್ತದಲ್ಲಿ ಸೇರಿದ ರೈತ ಸಂಘದ ಕಾರ್ಯಕರ್ತರು, ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟಾಗ ಸ್ಥಳೀಯ ಪೋಲಿಸ್ ಅಧಿಕಾರಿಗಳು ಕಾರ್ಯಕರ್ತರನ್ನು ತಡೆದ ಹಿನ್ನೆಲೆ ಪೋಲಿಸ್  ಸಿಬ್ಬಂದಿ ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ಜರುಗಿತು.
ರೈತ ಮುಖಂಡರನ್ನು ಮನವೊಲಿಸಲು ಪೋಲಿಸ್ ಅಧಿಕಾರಿಗಳು ಸಫಲರಾದರು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ ರೈತ ಸಂಘದ ಕಾರ್ಯಕರ್ತರು ತಮ್ಮ ಆಕ್ರೋಷ ವ್ಯಕ್ತಪಡಿಸಿದರು.
ರೈತ ಸಂಘದ ಮುಖಂಡರಾದ ಈರಣ್ಣಾ ಅಂಗಡಿ, ಗೋಪಾಲ ಬಾಳಿಕಟ್ಟಿ, ಚೂನಪ್ಪ ಪೂಜೇರಿ, ಶ್ರೀಶೈಲ ಅಂಗಡಿ ಪ್ರತಿಭಟನಾ ನಿರತರನ್ನು ಉದ್ಧೇಶಿಸಿ ಮಾತನಾಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನದಂತಿದೆ. ಕೃಷಿ ಇಲ್ಲದವರು ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗಿದೆ. ಶ್ರೀಮಂತರು ಮತ್ತು ಬಹುರಾಷ್ಟ್ರೀಯ ಕಂಪನಿಗಳನ್ನು ವಾಮಮಾರ್ಗದ ಮೂಲಕ ಕರೆತರಲು ಕಾಯ್ದೆ ವೇದಿಕೆಯಾಗಲಿದೆ’ ಹೀಗಾಗಿ ಅಗಸ್ಟ್ ೧೫ ಸ್ವಾತಂತ್ರೋತ್ಸವ ದಿನದಂದು ಜಿಲ್ಲೆಯಾದ್ಯಂತ ಮಹಾತ್ಮಾ ಗಾಂಧಿಯವರ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಎಪಿಎಂಸಿ ತಿದ್ದುಪಡಿ, ಎಮ್‌ಎಸ್‌ಪಿ ನೀತಿಗಳು, ಹೊಸ ವಿದ್ಯುತ್ ನೀತಿ, ಹೊಸ ಬೀಜ ನೀತಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಭಾರತದ ಕೃಷಿಯನ್ನು ಸಂಪೂರ್ಣವಾಗಿ ಕಾರ್ಪೊರೆಟ್ ಮಾಡಿ, ಬಡ ಹಾಗೂ ಸಣ್ಣ ರೈತರನ್ನು ಒಕ್ಕಲೆಬ್ಬಿಸುವ ದುರುದ್ದೇಶದ ನೀತಿಯನ್ನು ಹೊಂದಿದೆ ಎಂದು ಆರೋಪಿಸಿದರು.
೬೦ ವರ್ಷ ಮೇಲ್ಪಟ್ಟ ರೈತರಿಗೆ ೩,೦೦೦ ರೂ ಮಾಸಾಶನ ನೀಡಬೇಕು, ಎಪಿಎಂಸಿಗಳಿಗೆ ಹುತಾತ್ಮ ರೈತರ ಹೆಸರು ನಾಮಕಾರಣ ಮಾಡಬೇಕು, ಕೃಷಿ ಚಟುವಟಿಕೆಗಳಿಗೆ ರೈತರಿಗೆ ತೈಲ ದರದಲ್ಲಿ ವಿನಾಯಿತಿ ನೀಡಬೇಕು, ಪ್ರಕೃತಿ ವಿಕೋಪಕ್ಕೆ ಒಳಗಾದ ರೈತರಿಗೆ ಸರ್ಕಾರ ಸಕಾಲಕ್ಕೆ ಪರಿಹಾರ ಒದಗಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಪಾಂಡುರಂಗ ಬೀರನಗಡ್ಡಿ, ವಿ ಎಮ್ ಸಸಾಲಟ್ಟಿ, ಪ್ರಕಾಶ ತೇರದಾಳ, ಅಶೋಕ ಮಾಚಕನೂರ, ವೆಂಕಪ್ಪಾ ಅವರಾದಿ, ಲಕ್ಷ್ಮಣ ತೋಳಮರ್ಡಿ, ಸಕ್ರೆಪ್ಪಾ ತೋಳಮರ್ಡಿ, ಸುಭಾಸ ಸಾರಾಪೂರ, ಮಲ್ಲಪ್ಪಾ ಕುರಿ, ಯಮನಪ್ಪ ಚಿಂಚನೂರ, ಮಂಜುನಾಥ ಕುರಿ, ಟಿ ಜಿ ಪೂಜಾರಿ, ಸಚೀನ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button