ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿಯ ಪ್ರಾದೇಶಿಕ ಸಾರಿಗೆ ಕಛೇರಿಯ ಅಧಿಕಾರಿಗಳು ಸತತವಾಗಿ ಎಲ್ಲ ಬಗೆಯ ವಾಹನಗಳ ತಪಾಸಣೆ ಕೈಗೊಳ್ಳುವ ಕಾರ್ಯ ಮುಂದುವರೆಸಿದ್ದು, ವಾಹನ ಮಾಲಿಕರಿಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ.
- 6ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸಾಗಿಸುವ ಆಟೋರಿಕ್ಷಾಗಳಲ್ಲಿ ಮಕ್ಕಳನ್ನು ಕಳುಹಿಸಬಾರದು.
- ಖಾಸಗಿ ಓಮ್ನಿ ಬಸ್-ಮಾರುತಿ ವ್ಯಾನ್ ಇಂಥವುಗಳಲ್ಲಿ ಕೂಡಾ ಮಕ್ಕಳನ್ನು ಕಳುಹಿಸಬಾರದು. ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿರುವುದರಿಂದ, ರಸ್ತೆಯ ಮೇಲೆ ಮಕ್ಕಳಿಗೆ ಅನಾನುಕೂಲತೆ ಆಗಬಾರದು.
- ಆಟೋರಿಕ್ಷಾ ಚಾಲಕರು/ಮಾಲೀಕರು ನಿಗದಿತ ಸಂಖ್ಯೆ(6)ಯಲ್ಲಿ ಮಾತ್ರ ಶಾಲಾ ಮಕ್ಕಳನ್ನು ಸಾಗಿಸುವುದು. ಈ ನಿಯಮ ಮೀರಿದಲ್ಲಿ, ಅಂತಹ ವಾಹನಗಳ ಮಾಲೀಕರ/ ಚಾಲಕರ ಮೇಲೆ ೧೯೮೮ರ ಮೋಟಾರು ವಾಹನ ಕಾಯ್ದೆ ಹಾಗೂ ಅದರಡಿ ರಚಿತವಾದ ನಿಯಮಾವಳಿಗಳನ್ವಯ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ.
- ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು/ಶಾಲಾ ಮಕ್ಕಳನ್ನು/ಕೂಲಿ ಕಾರ್ಮಿಕರನ್ನು ಸಾಗಿಸುವಂತಿಲ್ಲ. ಒಂದು ವೇಳೆ ತಪಾಸಣೆ ಸಮಯದಲ್ಲಿ ನಿಯಮ ಬಾಹಿರವಾಗಿ ಸಾಗಿಸುವ ವಾಹನಗಳು ಕಂಡುಬಂದಲ್ಲಿ, ಅಂತಹ ವಾಹನಗಳ ನೋಂದಣಿ ಪ್ರಮಾಣ ಪತ್ರದ ಅಮಾನ/ಪರ್ಮಿಟ್ ಅಮಾನತ್ತು ಹಾಗೂ ಚಾಲನಾ ಲೈಸೆನ್ಸ್ ಅಮಾನತ್ತು ಹೀಗೆ ೧೯೮೮ರ ಮೋಟಾರು ವಾಹನ ಕಾಯ್ದೆ ಹಾಗೂ ಅದರಡಿ ರಚಿತವಾದ ನಿಯಮಾವಳಿಗಳಲ್ಲಿ ಪ್ರತ್ಯಾಯೋಜಿಸಿದ ಪ್ರದತ್ತವಾದ ಅಧಿಕಾರದನ್ವಯ ಕ್ರಮ ಕೈಗೊಳ್ಳಲಾಗುವುದು.
ಶಾಲಾ ಸಂಸ್ಥೆಗಳ ವಾಹನಗಳಲ್ಲಿ ನಿಗದಿಪಡಿಸಿದ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಸಾಗಿಸುವುದು ಕಂಡುಬಂದಲ್ಲಿ, ಅಂಥ ಶಾಲಾ ವಾಹನ/ವಿದ್ಯಾಸಂಸ್ಥೆ ವಾಹನಗಳ ಪರ್ಮಿಟ್ ಅಮಾನತ್ತು ಮಾಡಬೇಕಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ