*ಹೇಮರಡ್ಡಿ ಮಲ್ಲಮ್ಮ ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರು* *ರಂಗಭೂಮಿಗೆ ಸಾವಿಲ್ಲ ಎಂಬುದು ಸಾಬೀತು ಎಂದ ಬಸವರಾಜ ಜಗಜಂಪಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಂಗಸೃಷ್ಟಿ ತಂಡದವರಿಂದ ಬೆಳಗಾವಿಯಲ್ಲಿ ನಡೆದ ನಾಟಕಕ್ಕೆ ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ನೋಡಿದರೆ ರಂಗಭೂಮಿಗೆ ಸಾವಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಹಿರಿಯ ವಿಧ್ವಾಂಸ, ನಿವೃತ್ತ ಪ್ರಾಚಾರಾರ್ಯ ಡಾ.ಬಸವರಾಜ ಜಗಜಂಪಿ ಹೇಳಿದ್ದಾರೆ.
ಶನಿವಾರ ಕನ್ನಡಭವನದಲ್ಲಿ ನಡೆದ ನಾಟಕದ ಮಧ್ಯೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಭಾಂಗಣ ಪ್ರೇಕ್ಷಕರಿಂದ ತುಂಬಿ ಹೋಗಿದ್ದಲ್ಲದೆ, ಒಳಗಿರುವವರಿಗಿಂತ ಹೆಚ್ಚು ಜನರು ಕುಳಿತುಕೊಳ್ಳಲು ಅವಕಾಶ ಸಿಗದೆ ಮರಳಿ ಹೋಗುವಂತಾಗಿದೆ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ನಾಟಕ ನೋಡಲು ಬರುತ್ತಾರೆಂದರೆ ರಂಗಭೂಮಿ ಇನ್ನೂ ತನ್ನ ಆಕರ್ಷಣೆ ಕಳೆದುಕೊಂಡಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದರು.

ರಂಗಸೃಷ್ಟಿ ತಂಡದ ಕಲಾವಿದರು ಈ ಹಿಂದೆ ಅಭಿನಯಿಸಿದ ನಾಟಕಗಳಿಗೂ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಕಲಾವಿದರು ಬಹಳ ಶ್ರಮಪಟ್ಟು ನಾಟಕ ಕಲಿತು ಅಭಿನಯಿಸಿದ್ದಾರೆ. ಈ ರೀತಿ ಮನಃಪೂರ್ವಕವಾಗಿ ತೊಡಗಿಸಿಕೊಂಡಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಅವರು ಹೇಳಿದರು.
ನೀರಾವರಿ ಇಲಾಖೆಯ ಪ್ರಧಾನ ಅಭಿಯಂತರ ಅಶೋಕ ವಾಸನದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ರಂಗಸೃಷ್ಟಿ ತಂಡದ ಕಲಾವಿದರು ಪ್ರದರ್ಶಿಸಿದ ನಾಟಕ ಪ್ರೇಕ್ಷಕರಿಂದ ಭಾರೀ ಪ್ರಶಂಸೆ ಪಡೆಯಿತು. ಡಾ.ರಾಮಕೃಷ್ಣ ಮರಾಠೆ ರಚಿಸಿದ ನಾಟಕವನ್ನು ಶಿರೀಶ್ ಜೋಶಿ ನಿರ್ದೇಶಿಸಿದ್ದರು. ಲಿಂಗಾಯತ ಮಹಿಳಾ ಸಮಾಜ, ನಾವು ನಮ್ಮವರೊಂದಿಗೆ ಹಾಗೂ ಕನ್ನಡ ಭವನ ಸಹಯೋಗ ಒದಗಿಸಿತ್ತು. ರಂಗಸೃಷ್ಟಿ ಅಧ್ಯಕ್ಷ ರಮೇಶ ಜಂಗಲ್, ಉಪಾಧ್ಯಕ್ಷ ಎಂ.ಕೆ.ಹೆಗಡೆ, ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ನಾವು ನಮ್ಮವರೊಂದಿಗೆ ಸಂಘಟನೆಯ ಸರ್ವಮಂಗಳ ಅರಳಿಮಟ್ಟಿ, ಕನ್ನಡ ಭವನದ ಯ.ರು.ಪಾಟೀಲ ಮೊದಲಾದವರು ಇದ್ದರು.

ಶಾರದಾ ಭೋಜ, ಶರಣಯ್ಯ ಮಠಪತಿ, ವಿಶ್ವನಾಥ ದೇಸಾಯಿ, ಶರಣಗೌಡ ಪಾಟೀಲ, ಶಾಂತಾ ಆಚಾರ್ಯ, ಶ್ರದ್ಧಾ ಪಾಟೀಲ, ಜಯಶ್ರೀ ಕ್ಷೀರಸಾಗರ, ರಮೇಶ ಜಂಗಲ್, ಎ.ಎಂ.ಜಯಶ್ರೀ, ಶಾಂತಾ ಜಂಗಲ್, ಶೋಭಾ ಬನಶಂಕರಿ, ಪಿ.ಜಿ.ಕೆಂಪಣ್ಣವರ್, ಶೈಲಜಾ ಭಿಂಗೆ, ಲತಾ ಅರಕೇರಿ, ಜಯಶೀಲಾ ಬ್ಯಾಕೋಡ, ಪುಷ್ಪಾ ಮರಡೂರ, ಜ್ಯೋತಿ ಬದಾಮಿ, ಗಂಗಾ ತಿಮ್ಮನಾಯ್ಕರ್, ರಮೇಶ ಮಿರ್ಜಿ, ಸುರೇಖಾ ದೇಸಾಯಿ, ಸುಕಲ್ಪ ಮಠಪತಿ, ಶೋಭಾ ನ್ಯಾಮಗೌಡರ್, ಜ್ಯೋತಿ ಸೊನ್ನದ ಪಾತ್ರ ನಿರ್ವಹಿಸಿದರು.
ಮಂಜುಳಾ ಜೋಶಿ ಹಿನ್ನೆಲೆ ಗಾಯನ, ನಾರಾಯಣ ಗಣಾಚಾರಿ ತಬಲಾ, ರಮೇಶ ಮಿರ್ಜಿ ಸಂಗೀತ ನಿರ್ವಹಣೆ, ಗುರು ಪೆಡ್ನೇಕರ್ ಬೆಳಕಿನ ವಿನ್ಯಾಸ, ಶರಣಗೌಡ ಪಾಟೀಲ ರಂಗ ಸಜ್ಜಿಕೆ, ಶಾಂತಾ ಆಚಾರ್ಯ ನೃತ್ಯ ಸಂಯೋಜನೆ, ರಾಜಕುಮಾರ ಕುಂಬಾರ ರಂಗ ನಿರ್ವಹಣೆ ಮಾಡಿದರು.