Latest

ಫೇಸ್ ಬುಕ್ ಫೋಟೋ ನೋಡಿ ಬಲೆಗೆ ಬಿದ್ದ ಯುವಕ; 20ರ ಯುವತಿ ಎಂದು ವಂಚಿಸಿದ 50ರ ಆಂಟಿ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಫೇಸ್ ಬುಕ್ ನಲ್ಲಿ ಪರಿಚಯವಾದ ಮಹಿಳೆ ತಾನು ಇನ್ನು 20 ವರ್ಷದ ಯುವತಿ, ನಿನ್ನನ್ನೇ ಮದುವೆಯಾಗುತ್ತೇನೆ ಎಂದು ಯುವಕನೊಬ್ಬನನ್ನು ನಂಬಿಸಿ 3 ಲಕ್ಷ ರೂಪಾಯಿ ವಸೂಲಿ ಮಾಡಿದ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಫೇಸ್ ಬುಕ್, ವಾಟ್ಸಪ್ ಚಾಟಿಂಗ್ ಮೂಲಕ ಯುವಕನಿಗೆ ಮಹಿಳೆಯೊಬ್ಬಳ ಪರಿಚಯ, ಸ್ನೇಹ ಆರಂಭವಾಗಿದೆ. ಫೇಸ್ ಬುಕ್ ನಲ್ಲಿನ ಫೋಟೊ ನೋಡಿ ಯಾಮಾರಿದ ಯುವಕ ನೇರವಾಗಿ ಆಕೆಯನ್ನು ನೋಡದೇ ಪ್ರೀತಿಯ ಬಲೆಗೆ ಬಿದ್ದಿದ್ದಾನೆ. ಆಕೆಯನ್ನೇ ಮದುವೆಯಾಗಬೇಕು ಎಂದು ತೀರ್ಮಾನಿಸಿ ಮನೆಯವರನ್ನೆಲ್ಲ ಒಪ್ಪಿಸಿದ್ದಾನೆ. ತಾನಿನ್ನೂ 20ರ ಹುಡುಗಿ ಎಂದು ನಂಬಿಸಿದ್ದ ಮಹಿಳೆ 50 ವರ್ಷದ ಆಂಟಿ ಎಂದು ಗೊತ್ತಾಗುತ್ತಿದ್ದಂತೆ ಯುವಕ ಆಘಾತಕ್ಕೊಳಗಾಗಿದ್ದಾನೆ.

ಅಲ್ಲದೇ ಬರೋಬ್ಬರಿ 3 ಲಕ್ಷ ರೂಪಾಯಿ ಹಣ ತನ್ನಿಂದ ವಸೂಲಿ ಮಾಡಿದ್ದ ಆಂಟಿಯ ತುಂಟಾಟ ಕಂಡು ಯುವಕನಿಗೆ ಆಕಾಶವೇ ಕಳಚಿಬಿದ್ದಂತಾಗಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದ ಗ್ರಾಮವೊಂದರ ಯುವಕನಿಗೆ ಫೇಸ್ ಬುಕ್ ನಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಹಿಳೆಯೊಬ್ಬಳ ಪರಿಚಯವಾಗಿದೆ. ಫೇಸ್ ಬುಕ್ ಡಿಪಿ ನೋಡಿ ಯುವಕನೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಲ್ಲದೇ ಆಕೆಯೊಂದಿಗೆ ಆರಂಭವಾದ ಚಾಟಿಂಗ್ ಪ್ರೀತಿಗೆ ತಿರುಗಿದೆ. 20ರ ಹುಡುಗಿ ರೂಪದಲ್ಲಿದ್ದ 50ರ ಆಂಟಿ ಹಾಗೂ ಯುವಕನ ಚಾಟಿಂಗ್ ಫೋನ್ ಸಂಭಾಷಣೆಯಲ್ಲಿಯೂ ಮುಂದುವರೆದಿದ್ದು, ಯುವಕನಿಂದ ಆಂಟಿ 3 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾಳೆ.

ಇಷ್ಟೆಲ್ಲ ಆದ ಮೇಲೆ ಯುವಕ ಮದುವೆಯಾಗುವಂತೆ ಕೇಳಿದ್ದಾನೆ. ಅದಕ್ಕೆ ಸಧ್ಯಕ್ಕೆ ಬೇಡ ಎಂದು ಆಂಟಿ ರೂಪದಲ್ಲಿದ್ದ ಯುವತಿ ಹೇಳಿದ್ದಾಳೆ. ಆದರೆ ಯುವಕ ಹಠ ಹಿಡಿದಾಗ ತನ್ನ ದೊಡ್ಡಮ್ಮಳನ್ನು ನಿಮ್ಮ ಮನೆಗೆ ಕಳುಹಿಸುವುದಾಗಿ ಹೇಳಿ ಕಳಿಸಿದ್ದಾಳೆ. ಯುವತಿ ರೂಪದಲ್ಲಿದ್ದ 50ರ ಆಂಟಿಯೇ ಯುವಕನ ಮನೆಗೆ ಬಂದು ಮಾತುಕತೆ ನಡೆಸಿ, ಯುವತಿಯ ಮನೆಯವರು ಒಪ್ಪುತ್ತಿಲ್ಲ ಹಾಗಾಗಿ ಶಾಸ್ತ್ರ ಏನೂ ಬೇಡ ಇಲ್ಲಿಯೇ ಎಲ್ಲಾದರೂ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡೋಣ ಎಂದು ಹೇಳಿದ್ದಾಳೆ. ಅದಕ್ಕೂ ಒಪ್ಪಿದ ಯುವಕ ಹಾಗೂ ಆತನ ಕುಟುಂಬದವರು ಚುಂಚನಗಿರಿಯ ಮುಳಕಟ್ಟಮ್ಮ ದೇವಸ್ಥನದಲ್ಲಿ ಮದುವೆ ಸಿದ್ಧತೆ ಮಾಡಿದ್ದಾರೆ. ಮದುವೆ ಆಮಂತ್ರಣವೂ ಫ್ರಿಂಟ್ ಆಗಿದೆ. ಮದುವೆಗೆ ಬಟ್ಟೆ ಖರೀದಿಸಲು ಹೋಗೋಣ ಎಂದು ಯುವಕ ಕರೆ ಮಾಡುತ್ತಿದ್ದಂತೆ ಮಹಿಳೆ ನಿರಾಕರಿಸಲು ಆರಂಭಿಸಿದ್ದಾಳೆ. ಆಗ ಅನುಮಾನಗೊಂಡ ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ತನಿಖೆ ನಡೆಸಿದ ಪೊಲೀಸರು ಆಂಟಿಯ ಹೈಡ್ರಾಮಾ ಬಯಲು ಮಾಡಿದ್ದಾರೆ. ಅಲ್ಲದೇ ಆಂಟಿಯನ್ನು ಪೊಲೀಸ್ ಠಾಣೆಗೆ ಕರೆದು ಯುವಕನಿಗೆ ವಂಚಿಸಿದ್ದ ಹಣ ವಾಪಸ್ ನೀಡುವಂತೆ ಎಚ್ಚರಿಸಿದ್ದಾರಲ್ಲದೇ ಯುವಕನಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button